ಬೆಂಗಳೂರು: ರಾಜ್ಯ ಸರ್ಕಾರ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗೆ ಸಿದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಯೋಮಿತಿ ಹೆಚ್ಚಳದ ಕುರಿತೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಕುರಿತಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಕ್ಕೆ ಯುವಕರ ಸಮಸ್ಯೆಗಳ ಅರಿವು ಇದೆ. ನಾವು ವಿಪಕ್ಷದಲ್ಲಿದ್ದಾಗಲೂ ಸ್ಪಂದಿಸಿದ್ದೇವೆ. ಈಗಾಗಲೇ 35–40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ಹೇಳಿದರು.
ಒಳಮೀಸಲಾತಿ ಸಂಬಂಧಿತ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುತ್ತದೆ. ಗುರುವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬರಲಿದೆ ಎಂದು ತಿಳಿಸಿದರು. ತಕ್ಷಣ ಮಾಡಬಹುದಾದ ನೇಮಕಾತಿಗಳನ್ನು ತಕ್ಷಣ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಮೀಸಲಾತಿಯೂ ಇರಬೇಕು, ಸಾಮಾಜಿಕ ನ್ಯಾಯವೂ ಕಾಪಾಡಬೇಕು. ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುವಾಗ ಕೆಲವು ವಿಳಂಬಗಳು ಆಗಬಹುದು. ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ತೀರ್ಮಾನವಾಗುವವರೆಗೆ ತಡವಾಗಬಹುದು,” ಎಂದು ಹೇಳಿದರು.
ವಯೋಮಿತಿ ಹೆಚ್ಚಳದ ಬಗ್ಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಇನ್ನಷ್ಟು ಬೇಡಿಕೆಗಳಿದ್ದರೆ ಪರಿಶೀಲಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧ “ವ್ಯಾಪಾರ ಸೌಧ”ವಾಗಿತ್ತು ಎಂದು ಕಿಡಿಕಾರಿದ ಅವರು, ಆ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿವೆ. ಕೆಲವು ಹುದ್ದೆಗಳು ಹಣಕ್ಕೆ ಮಾರಾಟವಾಗಿದ್ದವು ಎಂಬ ಆರೋಪ ಮಾಡಿದರು.



