ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈ ಸುಳ್ಳಾಟ, ಕಳ್ಳಾಟವನ್ನು ನಿಲ್ಲಿಸಬೇಕು. 16 ಬಜೆಟ್ ಮಂಡಿಸಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ಅನುಭವಿ ಮುಖ್ಯಮಂತ್ರಿಗಳು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸುಳ್ಳು ಹೇಳುವುದು ಬಿಟ್ಟರೆ ಬೇರೇನನ್ನೂ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರದ ಮನೆದೇವರೇ ಸುಳ್ಳು ಎಂದು ದೂರಿದರು.
ಏನೇ ಸಮಸ್ಯೆಗಳು ಬಂದರೂ ಹಿಂದಿನ ಬಿಜೆಪಿ ಸರಕಾರವನ್ನು ದೂರುತ್ತಾರೆ. ಕೇಂದ್ರ ಸರಕಾರದ ಮೇಲೆ ಜವಾಬ್ದಾರಿ ಹಾಕುವಂಥದ್ದು ಮತ್ತು ತನ್ನ ಜವಾಬ್ದಾರಿಯ ಸ್ಥಾನದಿಂದ ನುಣುಚಿಕೊಳ್ಳುವ ಷಡ್ಯಂತ್ರ, ಕುತಂತ್ರವನ್ನು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯ ಧೋರಣೆಯೇ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಟೀಕಿಸಿದರು. ಇದು ನಾಡಿನ ಪ್ರತಿಯೊಬ್ಬರನ್ನೂ ಚಿಂತೆಗೀಡು ಮಾಡಿದೆ ಎಂದು ತಿಳಿಸಿದರು.
ರಾಜ್ಯದ ಆರೋಗ್ಯ ಇಲಾಖೆ ಪರಿಸ್ಥಿತಿ ಕುರಿತು ಮಾತನಾಡಿದ ಅವರು, 108 ಆಂಬುಲೆನ್ಸ್ ಸಿಬ್ಬಂದಿ ಮತ್ತು ವೈದ್ಯರು ಬೀದಿಗಿಳಿದು ಹೋರಾಡುವ ಪರಿಸ್ಥಿತಿಯನ್ನು ಸರಕಾರ ತಂದಿಟ್ಟಿದೆ. ಕಾಂಗ್ರೆಸ್ಸಿನವರು ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಾರೆ. ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಟೀಕಿಸಿದರು. ಇವರ ಬೇಜವಾಬ್ದಾರಿಯಿಂದ ರಾಜ್ಯದ ಆರೋಗ್ಯ ಇಲಾಖೆಯೇ ಐ.ಸಿ.ಯುನಲ್ಲಿದೆ. ಔಷಧಿ ಕೊರತೆ ಕಾಡುತ್ತಿದೆ ಎಂದು ಆಕ್ಷೇಪಿಸಿದರು.



