ಕೀನ್ಯಾ: ಮೊಂಬಾಸಾ ಕೌಂಟಿಯ ವಿಧಾನಸಭೆಯಲ್ಲಿ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಈ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ.
ಮೊಂಬಾಸಾ ಯುವ ಅಸೆಂಬ್ಲಿಯ ಕಾರ್ಯಕ್ರಮದ ವೇಳೆ, ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ‘ಭಗವದ್ಗೀತೆ ಆಸ್ ಇಟ್ ಇಸ್’ ಗ್ರಂಥವನ್ನು ಎತ್ತಿಹಿಡಿದು ಶಪಥ ಸ್ವೀಕರಿಸಿದರು. ಸಾರ್ವಜನಿಕ ಹುದ್ದೆಗಳು ಸಾಮಾನ್ಯವಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ದೇಶದಲ್ಲಿ ಈ ನಡೆ ವಿಶೇಷ ಮಹತ್ವ ಪಡೆದುಕೊಂಡಿದೆ.
ಈ ಕುರಿತು ಇಸ್ಕಾನ್ನ ಓಂಕಾರ ಮುಕುಂದ ದಾಸ್ ಪ್ರತಿಕ್ರಿಯಿಸಿ, ಇದು ನಾಟಕೀಯ ನಡೆ ಅಲ್ಲ, ಹೃದಯದಿಂದ ಬಂದ ಭಾವನೆ ಎಂದು ಹೇಳಿದ್ದಾರೆ.
ಕ್ಯಾಲೆಬ್ ಹರೇ ಕೃಷ್ಣ ಸಮುದಾಯದ ಭಕ್ತರಾಗಿದ್ದು, ತಮ್ಮ ಅಣ್ಣನ ಮೂಲಕ ಇಸ್ಕಾನ್ ಸಂಘಟನೆಯೊಂದಿಗೆ ಸೇರಿಕೊಂಡಿದ್ದಾರೆ. 2021ರಲ್ಲಿ ಸ್ಥಾಪಿತವಾದ ‘ದಿ ಬೆಟರ್ ಯು ಕ್ಲಬ್’ ಎಂಬ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮದ ಅಧ್ಯಕ್ಷರಾಗಿ 180ಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿದ್ದಾರೆ.



