ಬೆಂಗಳೂರು: ಸಿಎಂ ಕುರ್ಚಿ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಹೈಕಮಾಂಡ್‌ವೇ ಉತ್ತರ ನೀಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ತಮ್ಮ ಹೆಸರು ಕೂಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಈಗಾಗಲೇ ಉಂಟಾಗಿವೆ. ನಾನು ಅದನ್ನು ಇನ್ನಷ್ಟು ಗೊಂದಲಗೊಳಿಸಲು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.
ಅನೇಕರು ತಮ್ಮನ್ನು ಪ್ರಶ್ನಿಸುತ್ತಾರೆ. ಕೆಲ ಅಭಿಮಾನಿಗಳು ಸಿಎಂ ಆಗಬೇಕು ಎಂದು ಘೋಷಣೆಗಳನ್ನು ಕೂಗುತ್ತಾರೆ. ಆದರೆ ಇದರ ಕುರಿತು ಉತ್ತರ ನೀಡಬೇಕಾಗಿರುವುದು ಹೈಕಮಾಂಡ್. ಯಾವ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೋ, ಆ ಸಮಯದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ನಾನು ಯಾವತ್ತೂ ಲಾಬಿ ಮಾಡಲು ಹೋಗಿಲ್ಲ. ದೆಹಲಿಗೂ ಹೋಗಿಲ್ಲ. ಯಾವುದೇ ರೀತಿಯ ಲಾಬಿ ಮಾಡುತ್ತಿಲ್ಲ. ನಮ್ಮ ಹಿತೈಷಿಗಳು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರಬಹುದು.
ಅವರಿಗೆ ಮಾಡಬೇಡಿ ಎಂದು ಹೇಳುವುದು ಕಷ್ಟ. 2-3 ಬಾರಿ ಹಾಗೆ ಮಾಡಬೇಡಿ ಎಂದು ಹೇಳಿದ್ದೇನೆ. ಆದರೆ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ಗೊಂದಲಕ್ಕೆ ನಾನು ಕೈಜೋಡಿಸುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.



