ಬೆಂಗಳೂರು: ಆದಾಯ ತೆರಿಗೆ ಪಾವತಿಸುವುದು ವ್ಯಕ್ತಿಯ ಗೌಪ್ಯತೆಯ ವಿಷಯವಾಗಿದ್ದು, ವೈವಾಹಿಕ ವಿವಾದಗಳಲ್ಲಿ ದಂಪತಿಗಳ ಆದಾಯ ತೆರಿಗೆ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಪಡೆಯಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಸಮಗ್ರ ಮಾರ್ಗಸೂಚಿಗಳನ್ನು ಕೂಡ ನ್ಯಾಯಾಲಯ ಹೊರಡಿಸಿದೆ.
ಪತಿಯ ಆದಾಯ ತೆರಿಗೆ ಪಾವತಿ ವಿವರಗಳನ್ನು ಪತ್ನಿಗೆ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಆಯೋಗದ ಆದೇಶವನ್ನು ರದ್ದುಪಡಿಸಿದೆ.
ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಜೀವನಾಂಶ ಅಥವಾ ನಿರ್ವಹಣಾ ವೆಚ್ಚ ನಿಗದಿ ಮಾಡುವಾಗ ಪಕ್ಷಗಾರರ ಆದಾಯದ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯಗಳು ಎರಡೂ ಪಕ್ಷಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ಆದಾಯ ತೆರಿಗೆ ಇಲಾಖೆ ಅಥವಾ ಇತರೆ ಪ್ರಾಧಿಕಾರಗಳಿಗೆ ಮನವಿ ಮಾಡಬಹುದು ಎಂದು ನ್ಯಾಯಪೀಠ ಹೇಳಿದೆ.
ಪಕ್ಷಗಾರರ ಆದಾಯ ಕುರಿತ ವಿವಾದಗಳಿದ್ದರೆ, ಆದಾಯ ತೆರಿಗೆ ಇಲಾಖೆ, ಬ್ಯಾಂಕ್ಗಳು ಹಾಗೂ ಇತರೆ ಆರ್ಥಿಕ ಸಂಸ್ಥೆಗಳಿಗೆ ಸಮನ್ಸ್ ಜಾರಿ ಮಾಡುವ ಅಧಿಕಾರ ವಿಚಾರಣಾ ನ್ಯಾಯಾಲಯಗಳಿಗೆ ಇದೆ ಎಂದು ತಿಳಿಸಿದೆ.
ಆದಾಯ ತೆರಿಗೆ ಪಾವತಿ, ಮೌಲ್ಯಮಾಪನ ಹಾಗೂ ಇತರೆ ಹಣಕಾಸು ವಿವರಗಳು RTI ಕಾಯ್ದೆಯ ಸೆಕ್ಷನ್ 8(1)(ಜೆ) ಅಡಿಯಲ್ಲಿ ವೈಯಕ್ತಿಕ ಮಾಹಿತಿಯಾಗಿದ್ದು, ಅವುಗಳನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಇದೆ ಎಂದು ನ್ಯಾಯಾಲಯ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಅಡಗಿದ್ದಲ್ಲಿ ಮಾತ್ರ ಸೂಕ್ತ ಪ್ರಾಧಿಕಾರದ ಸೂಚನೆಯ ಮೇರೆಗೆ ಮಾಹಿತಿ ನೀಡಬಹುದಾಗಿದೆ.
ವೈವಾಹಿಕ ವಿವಾದಗಳು ಅಥವಾ ಜೀವನಾಂಶದ ಪ್ರಕರಣಗಳಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿರುವುದಿಲ್ಲ. ಆದ್ದರಿಂದ ಸಂಗಾತಿಯ ಆದಾಯ ತೆರಿಗೆ ವಿವರಗಳನ್ನು ಪಡೆಯಲು RTI ಮಾರ್ಗ ಬದಲಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ನಿಜವಾದ ಆದಾಯ ಮಾಹಿತಿ ಪಡೆಯಲು ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ವಿಚಾರಣಾ ನ್ಯಾಯಾಲಯಗಳು ಮತ್ತು ಆದಾಯ ತೆರಿಗೆ ಇಲಾಖೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನೂ ಹೈಕೋರ್ಟ್ ಪ್ರಕಟಿಸಿದೆ.



