ಹಲ್ಲೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಮುಸ್ಲಿಂ ಒಕ್ಕೂಟ ಪ್ರತಿಭಟನೆ
ವಿಜಯಸಾಕ್ಷಿ ಸುದ್ದಿ, ನರಗುಂದ
ಇಲ್ಲಿನ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳ ಮೇಲೆ ಮೂರ್ನಾಲ್ಕು ದಿನಗಳಿಂದ ಒಂದು ಕೋಮಿನ ಯುವಕರಿಂದ ನಿರಂತರವಾಗಿ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪಾಲಕರು ಬುಧವಾರ ಪಟ್ಟಣದ ಶಿವಾಜಿ ವೃತ್ತ ಹಾಗೂ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಕೆಲವು ಗೂಂಡಾಗಳು ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿ ಮಧ್ಯೆ ನಿಲ್ಲಿಸಿ ಸುಖಾಸುಮ್ಮನೆ ಹಲ್ಲೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಮೈಮೇಲಿನ ಬುರ್ಕಾ, ಮುಖದ ಮೇಲಿನ ನಕಾಬ್ ತೆಗೆಯಿರಿ ಎಂದು ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಚುಡಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸಿದರು. ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನರಗುಂದ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಿಗೆ ಅಂಜುಮನ್ ಇಸ್ಲಾಂ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.

ಘಟನೆ ವಿವರ
ಬುಧವಾರ (ಡಿ.1) ಬೆಳಗ್ಗೆ ಸರ್ಕಾರಿ ಉರ್ದು ಶಾಲೆಯ ಪ್ರಾರ್ಥನಾ ಸಮಯದಲ್ಲಿ 7 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ಇಬ್ಬರು ಶಿಕ್ಷಕರನ್ನು ಹೊಡೆದಿದ್ದಲ್ಲದೆ, ಶಾಲೆಯ ಕ್ಯಾಂಪಸ್ ಒಳಗಡೆ ಕಲ್ಲು ತೂರಾಡಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಾಯಗಳಾಗಿವೆ. ಬಿಡಿಸಲು ಶಿಕ್ಷಕರು ಎಷ್ಟೇ ಪ್ರಯತ್ನಿಸಿದರೂ ಹೊಡೆಯುವುದನ್ನು ನಿಲ್ಲಿಸದ ದುಷ್ಕರ್ಮಿಗಳು ಪೊಲೀಸರು ಬಂದ ಮೇಲಷ್ಟೇ ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ.

ಹಲ್ಲೆಗೈದವರು ಯಾರು?
ಕೆಲವು ದಿನಗಳಿಂದ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಲೇ ಇದೆ. ಆದರೆ, ಈ ಹಲ್ಲೆಗೆ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ. ಇನ್ನು ಹಲ್ಲೆ ಮಾಡಿರುವ ಹುಡುಗರು ಹಿಂದೂ ಸಂಘಟನೆಯೊಂದಕ್ಕೆ ಸೇರಿದವರು ಎನ್ನಲಾಗುತ್ತಿದೆ. ಏಕೆಂದರೆ, ಅವರು ಹಲ್ಲೆ ಮಾಡುವ ವೇಳೆ ಹೆಗಲ ಮೇಲೆ ಕೇಸರಿ ಶಾಲು ಹಾಕಿದ್ದರು ಎಂದು ಶಾಲೆಯ ಸಿಬ್ಬಂದಿಯೊಬ್ಬರು ಹೇಳುತ್ತಿದ್ದು, ನಿಜಕ್ಕೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ನಮ್ಮ ತಂದೆ ಬಂದು ಹೈಸ್ಕೂಲ್‌ಗೆ ಬಿಟ್ಟು ಹೋದ ಬಳಿಕ ಉಪಾಹಾರ ಮಾಡಬೇಕೆಂದು ಬಂದಾಗ ಯಾರೋ ಕೆಲವರು ಏಕಾಏಕಿ ಬಂದು ಹೊಡೆಯಲು ಪ್ರಾರಂಭಿಸಿದರು. ಹೆದರಿ ಓಡಿ ಶಾಲೆಯೊಳಗೆ ಬಂದರೆ, ಅಲ್ಲಿಯೂ ಬಂದು ಹೊಡೆದರು. ಆಗ ಶಿಕ್ಷಕರು ಬಿಡಿಸಲು ಬಂದಾಗ ಅವರಿಗೂ ಹೊಡೆದಿದ್ದಾರೆ. ಆದರೆ, ಹೊಡೆದವರು ಯಾರು ಎಂಬುವುದು ಗೊತ್ತಿಲ್ಲ.
ಹಲ್ಲೆಗೊಳಗಾದ ವಿದ್ಯಾರ್ಥಿ
ನಮ್ಮ ಶಾಲೆಯ ವಿದ್ಯಾರ್ಥಿಯನ್ನು ಏಳೆಂಟು ಹುಡುಗರು ಹೊಡೆಯುತ್ತಾ ಬಂದರು. ಹಿಂದು ಮುಂದೆ ಗೊತ್ತಿಲ್ಲದೆ ನಾವು ಯಾಕೆ ಹೊಡೆಯುತ್ತಿದ್ದೀರಿ ಅಂತಾ ಬಿಡಿಸಲು ಹೋದೆವು. ಕಲ್ಲು ತೂರಿದ್ದಕ್ಕೆ ನಮ್ಮ ವಿದ್ಯಾರ್ಥಿ ತಲೆಗೆ ಬಿದ್ದಿದೆ. ಆದರೆ, ಅವರು ಯಾರು, ಯಾವ ಧರ್ಮದವರು ಎಂದು ಗೊತ್ತಿಲ್ಲ.
ಉರ್ದು ಶಾಲೆಯ ಶಿಕ್ಷಕ
ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಮಾಡಿದವರು ಯಾರು ಎಂಬುವುದು ಗೊತ್ತಾಗಿಲ್ಲ. ಪ್ರಕರಣದ ಕುರಿತು ತನಿಖೆ ಕೈಗೊಳ್ಳಲಾಗಿದೆ.
ಶಂಕರ್ ರಾಗಿ, ಡಿವೈಎಸ್ಪಿ