ಪಾಕಿಸ್ತಾನ: ತಾಲಿಬಾನ್ ನಡೆಸಿದೆ ಎನ್ನಲಾದ ಗಡಿ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿರುವುದಾಗಿ ಪಾಕಿಸ್ತಾನ ಹೇಳಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆ ‘ಆಪರೇಷನ್ ಗಜಬ್ ಲಿಲ್ ಹಕ್’ ಹೆಸರಿನ ಕಾರ್ಯಾಚರಣೆ ಆರಂಭಿಸಿದ್ದು, 130ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರನ್ನು ಹತಮಾಡಲಾಗಿದೆ ಎಂದು ತಿಳಿಸಿದೆ.
ಆಫ್ಘನ್ ತಾಲಿಬಾನ್ ಹಲವಾರು ಗಡಿ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದ ಬಳಿಕ ಗುರುವಾರ ತಡರಾತ್ರಿ ಕಾರ್ಯಾಚರಣೆ ಪ್ರಾರಂಭವಾಗಿದೆ. ರಕ್ಷಣಾ ಸಚಿವ ಖವಾಜಾ ಆಸಿಫ್ ಕಾರ್ಯಾಚರಣೆ ನಡೆಯುತ್ತಿರುವುದನ್ನು ದೃಢಪಡಿಸಿದ್ದಾರೆ. ಪಾಕಿಸ್ತಾನದ ಸಶಸ್ತ್ರ ಪಡೆಗಳು ಅಫ್ಘಾನ್ ತಾಲಿಬಾನ್‌ನ ಆಕ್ರಮಣಕ್ಕೆ ಬಲವಾದ ಪ್ರತಿಕ್ರಿಯೆ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅತ್ತೌಲ್ಲಾ ತರಾರ್ ನೀಡಿದ ಮಾಹಿತಿಯಂತೆ, ಕನಿಷ್ಠ 133 ತಾಲಿಬಾನ್ ಕಾರ್ಯಕರ್ತರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕಾಬೂಲ್, ಪಕ್ತಿಯಾ ಮತ್ತು ಕಂದಹಾರ್ ಪ್ರದೇಶಗಳಲ್ಲಿನ ತಾಲಿಬಾನ್ ರಕ್ಷಣಾ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಹೆಚ್ಚಿನ ಪ್ರಮಾಣದ ಸಾವುನೋವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ತಿಳಿಸಿದೆ.
ತಾಲಿಬಾನ್ ಆಡಳಿತದ ಕನಿಷ್ಠ 27 ಗಡಿ ಪೋಸ್ಟ್‌ಗಳನ್ನು ನಾಶಪಡಿಸಲಾಗಿದ್ದು, ಇನ್ನೂ ಒಂಬತ್ತು ಪೋಸ್ಟ್‌ಗಳನ್ನು ಪಾಕ್ ಪಡೆಗಳು ವಶಕ್ಕೆ ಪಡೆದಿವೆ ಎಂದು ಹೇಳಲಾಗಿದೆ.



