ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರೇಮ ಕಲಹ ಭೀಕರ ತಿರುವು ಪಡೆದಿದೆ.
ತಾನು ಪ್ರೀತಿಸಿದ್ದ ಯುವಕ ಮದುವೆಗೆ ನಿರಾಕರಿಸಿ ದೂರವಾಗುತ್ತಿದ್ದಾನೆಂಬ ಆಕ್ರೋಶದಿಂದ 30 ವರ್ಷದ ಸುಧಾ ತನ್ನ ಪ್ರಿಯಕರ 27 ವರ್ಷದ ವೇಣುಗೋಪಾಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ಜಿಮ್‌ನಲ್ಲಿ ಪರಿಚಯವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇವರ ಸಂಬಂಧದಲ್ಲಿ ಕಳೆದ ನಾಲ್ಕು ತಿಂಗಳಿಂದ ಅಂತರ ಉಂಟಾಗಿತ್ತು ಎನ್ನಲಾಗಿದೆ.
ನಿನ್ನೆ ಸಂಜೆ ಮಾತನಾಡಬೇಕೆಂದು ಮನೆ ಹೊರಗೆ ಕರೆಸಿಕೊಂಡ ಸುಧಾ, ಕೆಲಕಾಲ ವಾಗ್ವಾದದ ಬಳಿಕ ವೇಣುಗೋಪಾಲ್‌ನ ಎದೆ, ಹೊಟ್ಟೆ ಮತ್ತು ಕೈ ಭಾಗಗಳಿಗೆ ಚಾಕು ಇರಿದು ಪರಾರಿಯಾಗಿದ್ದಾಳೆ. ರಕ್ತದ ಮಡುವಿನಲ್ಲಿದ್ದ ವೇಣು, ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.



