ದೇವನಹಳ್ಳಿ: ಅಮೆರಿಕ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ವಾತಾವರಣ ನಿರ್ಮಾಣವಾಗಿದೆ. ಇರಾನ್ ಸಹ ಪ್ರತಿದಾಳಿ ನಡೆಸುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿದೆ.
ಯುದ್ಧದ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಹಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಹಾಗೂ ವಿದೇಶಗಳಿಂದ ಆಗಮಿಸಬೇಕಿದ್ದ ಹಲವು ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ದುಬೈ, ಅಬುಧಾಬಿ, ರಿಯಾದ್ ಮತ್ತು ಜಿದ್ದಾ ನಗರಗಳಿಗೆ ತೆರಳಬೇಕಿದ್ದ ವಿಮಾನಗಳನ್ನು ಏರ್‌ಲೈನ್ಸ್‌ಗಳು ರದ್ದುಪಡಿಸಿವೆ. ಈ ಕುರಿತು ಪ್ರಯಾಣಿಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ.
ವಿವರಗಳ ಪ್ರಕಾರ, ರಾತ್ರಿ 8.20ಕ್ಕೆ ದುಬೈಗೆ ತೆರಳಬೇಕಿದ್ದ ಎಮಿರೇಟ್ಸ್ ವಿಮಾನ ರದ್ದುಪಡಿಸಲಾಗಿದೆ. ಇದೇ ರೀತಿ ರಾತ್ರಿ 10.10ಕ್ಕೆ ರಿಯಾದ್‌ಗೆ, ರಾತ್ರಿ 12.10ಕ್ಕೆ ಅಬುಧಾಬಿಗೆ ಹಾಗೂ ರಾತ್ರಿ 12.35ಕ್ಕೆ ಜಿದ್ದಾಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದೆ.
ಇನ್ನೂ ದುಬೈನಿಂದ ರಾತ್ರಿ 2.40ಕ್ಕೆ ಬೆಂಗಳೂರಿಗೆ ಆಗಮಿಸಬೇಕಿದ್ದ ಎಮಿರೇಟ್ಸ್ ವಿಮಾನ, ದೋಹಾದಿಂದ ರಾತ್ರಿ 2.50ಕ್ಕೆ ಹಾಗೂ ದುಬೈನಿಂದ ರಾತ್ರಿ 3.40ಕ್ಕೆ ಬರಬೇಕಿದ್ದ ಇಂಡಿಗೋ ವಿಮಾನಗಳೂ ರದ್ದು ಮಾಡಲಾಗಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಹದಗೆಟ್ಟರೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



