ಹಾಸನ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮ ದುಬೈ ಹಾಗೂ ಅಬುಧಾಬಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ದುಬೈ ಒಕ್ಕಲಿಗರ ಸಂಘ ತುರ್ತು ನೆರವಿಗಾಗಿ ಮುಂದಾಗಿದ್ದು, ಸಂಘದ ಅಧ್ಯಕ್ಷ ಯತೀಶ್ ಸಹಾಯಕ್ಕಾಗಿ +971555114205 ಸಂಖ್ಯೆಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.
ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಪ್ರವಾಸಿಗರು ವಾಪಸ್ಸಾಗಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. 20 ಮಹಿಳೆಯರು ಮತ್ತು 30 ಪುರುಷರು ದುಬೈನಲ್ಲಿ ಉಳಿದಿದ್ದಾರೆ.
ಬಾಗಲಕೋಟೆಯ ಬೀಳಗಿ ಮೂಲದ ಗಿರೀಶ್ ಕೆರೂರು ಪ್ಯಾರಿಸ್‌ಗೆ ತೆರಳುವ ವೇಳೆ ಅಬುಧಾಬಿಯಲ್ಲಿ ಸಿಲುಕಿದ್ದು, ತಮ್ಮ ಸ್ಥಿತಿಗತಿಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಮಾರ್ಚ್ 2ರವರೆಗೆ ವಿಮಾನ ಹಾರಾಟ ಇರುವುದಿಲ್ಲ ಎಂಬ ಮಾಹಿತಿ ದೊರೆತಿದೆ.
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕನ್ನಡಿಗರ ಮೇಲೂ ತೀವ್ರವಾಗಿ ತಟ್ಟಿದ್ದು, ಎಲ್ಲರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬರುತ್ತಿವೆ.



