ಕೋಲಾರ: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ 201ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಹತ್ಯೆಯಾದರೆಂಬ ವರದಿಗಳು ಹೊರಬಿದ್ದಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಹಲವೆಡೆ ವಿಮಾನ ಹಾರಾಟ ರದ್ದಾಗಿದೆ.
ಪರಿಣಾಮವಾಗಿ ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕನ್ನಡಿಗರು ಹಾಗೂ ಭಾರತೀಯರು ಸಿಲುಕಿದ್ದಾರೆ. ಅವರ ರಕ್ಷಣೆಗೆ ಕೋಲಾರ ಜಿಲ್ಲಾಡಳಿತ ಸಹಾಯವಾಣಿ ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.
ಕತಾರ್, ಬಹ್ರೇನ್, ಜೋರ್ಡಾನ್, ಇರಾಕ್, ಕುವೈತ್ ಹಾಗೂ ಪ್ಯಾಲೆಸ್ಟೈನ್ ದೇಶಗಳ ಸಹಾಯವಾಣಿ ಸಂಖ್ಯೆಗಳು ಪ್ರಕಟವಾಗಿದ್ದು, ಅಗತ್ಯವಿದ್ದರೆ ಸಂಪರ್ಕಿಸಲು ಮನವಿ ಮಾಡಲಾಗಿದೆ.
ಇದೇ ವೇಳೆ ಕೋಲಾರ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದ್ದು, 9740050061 ಮತ್ತು 9606241449 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ದುಬೈನಲ್ಲಿ ಸಿಲುಕಿರುವ ಬಳ್ಳಾರಿ ಜಿಲ್ಲೆಯ 50ಕ್ಕೂ ಹೆಚ್ಚು ಜನರ ನೆರವಿಗೆ ಮಾಜಿ ಸಚಿವ ಬಿ. ನಾಗೇಂದ್ರ ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಕಾಲ್ ಮೂಲಕ ಸಿಲುಕಿದವರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.
ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಗೌಡ ಕೂಡ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸಹಾಯಕ್ಕಾಗಿ 971 52 699 5413 ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಭಾರತೀಯರ ಮೇಲೂ ತೀವ್ರವಾಗಿ ತಟ್ಟಿದ್ದು, ಸಿಲುಕಿರುವವರ ಸುರಕ್ಷಿತ ವಾಪಸ್ಸಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.



