ಲಕ್ಕುಂಡಿ: ಕಳೆದ 23 ವರ್ಷಗಳಿಂದ ಶಿಲ್ಪಕಲೆಯಲ್ಲಿ ಅನನ್ಯ ಸಾಧನೆಗೈದ ಶಿಲ್ಪಿ ಸುಮಲತಾ ವಿ. ಕವಲೂರ ಅವರಿಗೆ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಮಾಧ್ಯಮಗಳಾದ ಕಲ್ಲು, ಮರ, ಮಣ್ಣು ಹಾಗೂ ಪಿ.ಒ.ಪಿ ಮೂಲಕ ಅನೇಕ ಕೃತಿಗಳನ್ನು ರೂಪಿಸಿ ಗಮನಸೆಳೆದಿರುವ ಸುಮಲತಾ ಅವರು ಶಿಲ್ಪಕಲೆಯನ್ನು ತಮ್ಮ ಜೀವನ ವೃತ್ತಿಯಾಗಿಸಿಕೊಂಡಿದ್ದಾರೆ. ನೂರಾರು ಪ್ರಶಸ್ತಿಗಳು ಹಾಗೂ ಸನ್ಮಾನಗಳಿಗೆ ಪಾತ್ರರಾಗಿರುವ ಅವರ ಸಾಧನೆಯನ್ನು ಗುರುತಿಸಿ ಫೆಬ್ರವರಿ 28, 2026ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ರಾಜ್ಯ, ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಮಟ್ಟದ ಶಿಬಿರಗಳು ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ. ನಾಗಪುರದಲ್ಲಿ ನಡೆದ ದಕ್ಷಿಣ ವಲಯ ಶಿಬಿರ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
ಲಕ್ಕುಂಡಿ ಗ್ರಾಮದ ವೀರಭದ್ರಪ್ಪ ಕವಲೂರ ಹಾಗೂ ಗಂಗೂಬಾಯಿ ವಿ. ಕವಲೂರ ದಂಪತಿಗಳ ಪುತ್ರಿಯಾಗಿರುವ ಸುಮಲತಾ ಅವರು, ಶಿಲ್ಪರತ್ನ ಪ್ರಶಸ್ತಿ, ವಿಶ್ವಕರ್ಮ ಶಿಲ್ಪಿ ಬ್ರಹ್ಮ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯ ಮಟ್ಟದ ಗೌರವಗಳಿಗೆ ಪಾತ್ರರಾಗಿದ್ದಾರೆ.
ಮೂಲತಃ ಲಕ್ಕುಂಡಿಯವರಾದ ಅವರು, ಗ್ರಾಮದ ಐತಿಹಾಸಿಕ ದೇವಾಲಯಗಳ ಶಿಲ್ಪಕಲೆಯನ್ನು ಆಧರಿಸಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿರುವುದು ಗಮನಾರ್ಹವಾಗಿದೆ. ಗೌರವ ಡಾಕ್ಟರೇಟ್ ಪಡೆದ ಅವರಿಗೆ ಶಿಲ್ಪಕಲೆ ಹಾಗೂ ಕೆತ್ತನೆ ಕ್ಷೇತ್ರದ ವಿವಿಧ ಸಂಘಟನೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.



