ಬೆಂಗಳೂರು: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಟ್ಟು 22 ವಿಮಾನಗಳ ಹಾರಾಟ ರದ್ದುಗೊಂಡಿದೆ.
ವಾಯುಪ್ರದೇಶ ಮುಚ್ಚಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಬೇಕಿದ್ದ 10 ವಿಮಾನಗಳು ಹಾಗೂ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 12 ವಿಮಾನಗಳು ಸೇರಿ ಒಟ್ಟು 22 ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್‌ಗೆ ಸಂಚರಿಸುವ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ, ಖತಾರ್ ಏರ್‌ವೇಸ್ ಸೇರಿದಂತೆ ಹಲವು ಏರ್‌ಲೈನ್ಸ್‌ಗಳು ತಮ್ಮ ಹಾರಾಟಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿವೆ.
ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಟಿಕೆಟ್‌ಗಳನ್ನು ಮರುನಿಗದಿ (ರಿ-ಸ್ಕೆಡ್ಯೂಲ್) ಮಾಡುವ ಅಥವಾ ಹಣವನ್ನು ಮರುಪಾವತಿ ಮಾಡುವ ಅವಕಾಶವನ್ನು ಏರ್‌ಲೈನ್ಸ್‌ಗಳು ನೀಡಿವೆ. ಯುದ್ಧ ಆರಂಭವಾದ ಕ್ಷಣದಿಂದಲೇ ಸಂಬಂಧಿತ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲೈಟ್ ದೃಢೀಕರಣವಿಲ್ಲದೆ ವಿಮಾನ ನಿಲ್ದಾಣಕ್ಕೆ ಬಾರದಂತೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮನವಿ ಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ವಿಮಾನ ನಿಲ್ದಾಣದ ಸಹಾಯ ಕೌಂಟರ್‌ಗಳಲ್ಲಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ.



