ಬೆಂಗಳೂರು: ಕರ್ನಾಟಕ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಮತ್ತು ಡಿಜಿಟಲ್ ವ್ಯಸನದಿಂದ ಉಂಟಾಗುವ ಆರೋಗ್ಯ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
2026-27ನೇ ಸಾಲಿನ ಬಜೆಟ್ ಮಂಡನೆ ವೇಳೆ ಮಾತನಾಡಿದ ಸಿಎಂ, ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲಾ-ಕಾಲೇಜುಗಳು, ವಿಶ್ವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದರು.
ಇನ್ನೂ ಈ ವಿಷಯದ ಕುರಿತು ನಡೆದ ವಿವಿಧ ಸಭೆಗಳಲ್ಲಿ ಚರ್ಚೆ ನಡೆಸಲಾಗಿದ್ದು, ಅಪ್ರಾಪ್ತ ಮಕ್ಕಳಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಯುವ ಮೂಲಕ ಅವರ ಆರೋಗ್ಯ ಮತ್ತು ಭವಿಷ್ಯವನ್ನು ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ.
ಮಕ್ಕಳ ಮೇಲೆ ಮೊಬೈಲ್ ಬಳಕೆ ಮತ್ತು ಡಿಜಿಟಲ್ ವ್ಯಸನದ ಪರಿಣಾಮಗಳ ಕುರಿತು ಮಾದ್ಯಮಗಳಲ್ಲಿ ಸಂಪೂರ್ಣ ವರದಿ ಪ್ರಸಾರ ಮಾಡಿತ್ತು. ಈ ವರದಿ ಮಕ್ಕಳಿಗೆ ಉಂಟಾಗುವ ಸಮಸ್ಯೆಗಳನ್ನು ಹೈಲೈಟ್ ಮಾಡಿ ಸಾರ್ವಜನಿಕರು ಹಾಗೂ ಶಾಸಕರ ಗಮನ ಸೆಳೆದಿತ್ತು.
ನಂತರ 2025-26ರ ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಘೋಷಣೆ ಮಾಡಿದ್ದಾರೆ.



