ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಎಸ್‌ಸಿ–ಎಸ್‌ಟಿ ನಾಯಕರ ಬೃಹತ್ ಜನಾಂದೋಲನದಲ್ಲಿ ಮಾಜಿ ಸಚಿವ ಕೆ. ಶಿವನಗೌಡ ನಾಯಕ್ ಅವರು ಸಚಿವ ಎಚ್.ಸಿ ಮಹದೇವಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, “ದಲಿತ ಸಚಿವನಿಂದಲೇ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು. ನಾವು ಮದಕರಿ ನಾಯಕರ ವಂಶಸ್ಥರು. ಅನ್ಯಾಯದ ವಿರುದ್ಧ ಬೇಟೆಯಾಡುವವರು. ದಲಿತ ಸಚಿವ ಮಹದೇವಪ್ಪ ಅವರಿಂದಲೇ ನಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ತೀವ್ರವಾಗಿ ಮಾತನಾಡಿದ ಅವರು, “ಅವರು ಸಿಕ್ಕರೆ ಕಪಾಳಕ್ಕೆ ಹೊಡೆಯಬೇಕು ಅನಿಸುತ್ತದೆ” ಎಂದು ಹೇಳುವ ಮೂಲಕ ಮಹದೇವಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಹೋರಾಟಕ್ಕೆ ಬರುವವರು ಧೈರ್ಯದಿಂದ ಬರಬೇಕು. “ಮೀಸಲಾತಿ ಪಡೆದುಕೊಂಡು ಧೀರರಾಗಿ ಬರುತ್ತೇವೆ ಅಥವಾ ಶವವಾಗಿ ಬರುತ್ತೇವೆ ಎಂದು ಮನೆಯಲ್ಲಿ ಹೇಳಿಯೇ ಬನ್ನಿ” ಎಂದು ಅವರು ಹೋರಾಟಗಾರರಿಗೆ ಕರೆ ನೀಡಿದರು. ಈ ಹೋರಾಟದಲ್ಲಿ ಏನೇ ಆದರೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.



