ಅಂತಿಮ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ಬ್ಯಾಟರ್‌ಗಳು ಹಾಗೂ ನಂತರ ಬೌಲರ್‌ಗಳ ಕಠಿಣ ಬೌಲಿಂಗ್ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
ಈ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತು. ಈ ಭಾರೀ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲು ಒಪ್ಪಿಕೊಂಡಿತು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡು ಬಾರಿ ಅಂತಿಮ ಪಂದ್ಯ ಗೆದ್ದ ಮೊದಲ ತಂಡವಾಗಿ ಭಾರತ ಹೊರಹೊಮ್ಮಿದೆ. 2008, 2024 ಮತ್ತು 2026ರಲ್ಲಿ ಜಯಗಳಿಸುವ ಮೂಲಕ ಭಾರತ ಮೂರು ಬಾರಿ ಪ್ರಶಸ್ತಿ ಗೆದ್ದು ಹೊಸ ದಾಖಲೆ ನಿರ್ಮಿಸಿದೆ.
ಪಂದ್ಯದಲ್ಲಿ ಭಾರತ ತಂಡ ದಾಖಲಿಸಿದ 255 ರನ್‌ಗಳು ಟಿ20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟ ತೋರಿದರೂ ನಂತರ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ ಟಿಮ್ ಸೀಫರ್ಟ್ ವೇಗವಾಗಿ ರನ್ ಗಳಿಸಿದರೂ ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಎದುರಿಸಲು ಸಾಧ್ಯವಾಗಲಿಲ್ಲ.
ಮಧ್ಯಮ ಕ್ರಮದ ಆಟಗಾರರಾದ ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಸ್ವಲ್ಪ ಪ್ರತಿರೋಧ ತೋರಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತದ ಬೌಲರ್‌ಗಳ ಶಕ್ತಿಶಾಲಿ ಪ್ರದರ್ಶನದ ಎದುರು ನ್ಯೂಜಿಲೆಂಡ್ ತಂಡ 159 ರನ್‌ಗಳಿಗೆ ಕುಸಿದು ಭಾರತ ಭರ್ಜರಿ ಜಯ ಸಾಧಿಸಿತು.
ಭಾರತ ತಂಡದ ಈ ಅಮೋಘ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಟೀಮ್ ಇಂಡಿಯಾದ ಪ್ರದರ್ಶನವನ್ನು ಹಾಡಿ ಹೊಗಳಿದಿದ್ದಾರೆ.
ಚಾಂಪಿಯನ್ಸ್! ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಟೀಮ್ ಇಂಡಿಯಾ ಟೂರ್ನಿಯುದ್ದಕ್ಕೂ ಅತ್ಯುತ್ತಮ ಧೈರ್ಯವನ್ನು ತೋರಿಸಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನು ಸಂತಸ ಮತ್ತು ಹೆಮ್ಮೆ ಪಡುವಂತೆ ಮಾಡಿದೆ. ಅಭಿನಂದನೆಗಳು, ಟೀಮ್ ಇಂಡಿಯಾ! ಎಂದು ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.



