ಬೆಳಗಾವಿ: ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ವಾಹನ ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್ನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಂದು ವಾಹನ ಕಳ್ಳತನ ಪ್ರಕರಣದ ತನಿಖೆ ವೇಳೆ ಪೊಲೀಸರ ಬಲೆಗೆ ದೊಡ್ಡ ಗ್ಯಾಂಗ್ ಸಿಕ್ಕಿಬಿದ್ದಿದ್ದು, ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ 21 ಕಳವು ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಆರೋಪಿಗಳ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಯೂಸುಫ್ ಖಾನ್, ಜಾಕೀರ್ ಹುಸೇನ್, ಶಫೀಕ್ ಅಹಮ್ಮದ್, ಆಜಾದ್ ಹಾಗೂ ಬಶೀರ್ ಅಹಮ್ಮದ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೇರಿದವರು ಎಂಬುದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ 8 ಮಿನಿ ಗೂಡ್ಸ್ ವಾಹನಗಳು, ರಾಯಲ್ ಎನ್ಫೀಲ್ಡ್ ಮತ್ತು ಹೋಂಡಾ ಸೇರಿದಂತೆ 8 ಬೈಕ್ಗಳು ಹಾಗೂ 5 ಸ್ಕೂಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಮಿನಿ ಗೂಡ್ಸ್ ವಾಹನ ಕಳ್ಳತನವಾಗಿತ್ತು. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಬೈಕ್ನಲ್ಲಿ ಬಂದ ನಾಲ್ವರು ಆರೋಪಿಗಳು ಮಿನಿ ಗೂಡ್ಸ್ ವಾಹನ ಕದ್ದು ಪರಾರಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಪತ್ತೆಯಾಯಿತು.
ಆರೋಪಿಗಳು ಬಳಸಿದ್ದ ಬೈಕ್ ಸಂಖ್ಯೆಯ ಸುಳಿವು ಹಿಡಿದು ಪೊಲೀಸರು ಪರಿಶೀಲನೆ ನಡೆಸಿದಾಗ ಆ ಬೈಕ್ ಕೂಡ ಕಳ್ಳತನವಾಗಿರುವುದು ಬೆಳಕಿಗೆ ಬಂತು. ಹೀಗಾಗಿ ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತಷ್ಟು ವಾಹನ ಕಳ್ಳತನ ಮಾಡುತ್ತಿರುವ ಗ್ಯಾಂಗ್ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು.
ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಕೊನೆಗೂ ಐದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಳುವಾಗಿದ್ದ ತಮ್ಮ ವಾಹನಗಳು ಮರಳಿ ಸಿಕ್ಕ ಹಿನ್ನೆಲೆಯಲ್ಲಿ ವಾಹನ ಮಾಲೀಕರು ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



