ಬೆಂಗಳೂರು/ಗದಗ : 5 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಫೆಬ್ರವರಿಯಲ್ಲಿ ಗುತ್ತಿಗೆದಾರನಿಂದ ಸುಮಾರು ಐದು ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಾಸಕರನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಲಾಗಿತ್ತು. ಕಳೆದ 15 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅವರಿಗೆ, 2 ಲಕ್ಷ ರೂ. ಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಪಡೆದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಶಾಸಕನ ವಿರುದ್ಧ ಲಂಚ ಬೇಡಿಕೆ ಆರೋಪ:
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಂಕಧಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರು 11 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.
ಅಲ್ಲದೇ ಕಮಿಷನ್ ಕೊಟ್ಟರೆ ಮಾತ್ರ ಕಾಮಗಾರಿ ಎಂದು ಶಾಸಕ ಗುತ್ತಿಗೆದಾರರಿಗೆ ಧಮ್ಕಿ ಹಾಕಿದ್ದರು. ಒಂದು ವೇಳೆ 12 ಪರ್ಸೆಂಟ್ ಕಮಿಷನ್ ನೀಡದಿದ್ದರೆ ಟೆಂಡರ್ ರದ್ದು ಮಾಡಿ ರೌಡಿಗಳನ್ನು ಕಳುಹಿಸುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಗುತ್ತಿಗೆದಾರ ವಿಜಯ್ ಪೂಜಾರ, ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿದ್ದರು.
ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಡಾ. ಚಂದ್ರು ಲಮಾಣಿ ಅವರ ಒಡೆತನದ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಐದು ಲಕ್ಷ ಹಣ ಲಂಚ ಸ್ವೀಕರಿಸುವಾಗ ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ ಬಿದ್ದಿದ್ದರು.
ನಂತರ, ಅವರನ್ನು ಬಂಧಿಸಿ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಶಾಸಕರಿಗೆ ಜಾಮೀನು ಸಿಕ್ಕಿದೆ.



