ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ: ದಿ ಡೆವಿಲ್’ ಸಿನಿಮಾದ ಸರ್ಸೆ ಸರ್ಸೆ ಹಾಡು ಅಶ್ಲೀಲವಾಗಿದೆ ಎಂದು ಮಹಿಳಾ ಆಯೋಗ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಪತ್ರ ಬರೆದಿದೆ. ಪತ್ರದಲ್ಲಿ, ಹಾಡು ಮಹಿಳೆಯರ ಘನತೆಗೆ ಧಕ್ಕೆ ತರುವಂತಹದು ಎಂದು ಆಕ್ಷೇಪ ವ್ಯಕ್ತವಾಗಿದೆ.
ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡಿನ ಸಾಹಿತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ದೆಹಲಿಯ ಸೈಬರ್ ಸೆಲ್ ಗೆ ವಕೀಲ ವಿನೀತ್ ಜಿಂದಾಲ್ ದೂರು ಸಲ್ಲಿಸಿದ್ದು, ನೋರಾ ಫತೇಹಿ, ಸಂಜಯ್ ದತ್, ಗೀತರಚನೆಕಾರ ರಕೀಬ್ ಆಲಂ ಮತ್ತು ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಿವಾದದ ಹಿನ್ನೆಲೆಯಲ್ಲಿ, ಹಿಂದಿ ಹಾಡನ್ನು ಯೂಟ್ಯೂಬ್ ನಿಂದ ಕೆವಿಎಲ್ ಪ್ರೊಡಕ್ಷನ್ಸ್ ತಾತ್ಕಾಲಿಕವಾಗಿ ತೆಗೆದು ಹಾಕಿದೆ. ಪ್ರಕರಣದ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 ಮತ್ತು ಐಟಿ ಕಾಯ್ದೆ ಅಡಿಯಲ್ಲಿ FIR ದಾಖಲಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.



