ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಅಧಿಕಾರಿಗಳು ನಾಲ್ಕು ವಿಭಿನ್ನ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಆತ್ಮಹತ್ಯೆ ನಡೆದ ಸ್ಥಳದಿಂದ ವಿವಿಧ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿಯೂ ಲಭ್ಯವಾಗಿದೆ.
ಇದಕ್ಕೆ ಜೊತೆಗೆ ಕುಟುಂಬಸ್ಥರು, ಐಟಿ ಅಧಿಕಾರಿಗಳು, ಆತ್ಮೀಯರು ಹಾಗೂ ವ್ಯವಹಾರಿಕ ಸಂಪರ್ಕ ಹೊಂದಿದವರ ಹೇಳಿಕೆಗಳನ್ನು ದಾಖಲಿಸಿ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಈ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ತನಿಖಾ ವರದಿ ಸಿದ್ಧಪಡಿಸಲಾಗಿದೆ.
ಆದರೆ ತನಿಖೆ ಪೂರ್ಣಗೊಂಡಿದ್ದರೂ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲ. ಪ್ರಾಥಮಿಕ ವರದಿಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಆದರೆ ಆ ಖಿನ್ನತೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಾನ್ಫಿಡೆಂಟ್ ಗ್ರೂಪ್ ಮಾಲೀಕರಾದ ಸಿಜೆ ರಾಯ್ ಅವರು 2026 ಜನವರಿ 30ರಂದು ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಸುತ್ತ ಇನ್ನೂ ಕುತೂಹಲ ಮುಂದುವರಿದಿದೆ.



