ವಿಕೋಪಕ್ಕೆ ಹೋದ್ರೆ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತೆ: ಸಿ.ಸಿ.ಪಾಟೀಲ್
ವಿಜಯಸಾಕ್ಷಿ ಸುದ್ದಿ, ಗದಗ:
‘ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಕರ್ನಾಟಕದ ಇಬ್ಬರು ಹೆಮ್ಮೆಯ ವ್ಯಕ್ತಿಗಳ ಮೂರ್ತಿಗಳನ್ನು ವಿಕಾರಗೊಳಿಸುವ ಎಂಇಎಸ್ ಪುಂಡರಿಗೆ ನಮ್ಮ ಸರ್ಕಾರ ಸರಿಯಾದ ಪಾಠ ಕಲಿಸುತ್ತದೆ. ಮರಾಠಿಗರು ಇನ್ನಾದರೂ ಇಂತಹ ಪುಂಡಾಟಿಕೆ ಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.
ಶನಿವಾರ ಗದಗನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಪ್ರತಿವರ್ಷ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಎಂಇಎಸ್ ನವರು ಇಂತಹ ಕಿತಾಪತಿ ಮಾಡುತ್ತಲೇ ಬರುತ್ತಿದ್ದು, ಈ ವರ್ಷ ಆ ಚಾಳಿಯನ್ನು ಮುಂದುವರೆಸಿದ್ದಾರೆ’ ಎಂದರು.
‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೇಕೆಂದವರಿಗೆ ಬಿಟ್ಟು ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಬೆಳಗಾವಿ ಅಧಿವೇಶನ ಅತ್ಯಂತ ಯಶಸ್ವಿಯಾದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಎಂಬ ಕಾರಣಕ್ಕೆ ಎಂಇಎಸ್ ನವರು ಈ ರೀತಿ ಮಾಡುತ್ತಿದ್ದಾರೆ. ಎಂಇಎಸ್ ನವರು ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದು, ಅವರು ಅರ್ಥ ಮಾಡಿಕೊಳ್ಳಬೇಕು. ಆದರೆ, ಕರ್ನಾಟಕದವರು ಶಾಂತಿಪ್ರಿಯರು ಅವರಂತೆ ನಾವು ಮಾಡಬಾರದು’ ಎಂದು ಮನವಿ ಮಾಡಿಕೊಂಡರು.
ಶಿವಸೇನಾ ಕಾರ್ಯಕರ್ತರ ಕಲ್ಲು ತೂರಾಟದ ಕುರಿತು ಪ್ರತಿಕ್ರಿಯಿಸಿದ ಅವರು ‘ಕರ್ನಾಟಕದ ಕಾರುಗಳು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತವೆ. ಓಡಾಡುತ್ತವೆ. ಅವರು ಅಲ್ಲಿ ತೊಂದರೆ ಮಾಡಿದರೆ, ಇಲ್ಲಿಯ ಅವರ ಜನಕ್ಕೆ ತೊಂದರೆ ಆಗುತ್ತದೆ ಎಂಬ ಪರಿಕಲ್ಪನೆ ಇರಬೇಕು. ಅಲ್ಲಿ ಅವರು ಕಲ್ಲು ತೂರಿದ್ದಾರೆಂದು ನಮ್ಮವರು ಕಲ್ಲು ತೂರಿ ಅಂತಾ ಹೇಳುವುದಿಲ್ಲ. ವಿಕೋಪಕ್ಕೆ ಹೋದಾಗ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತದೆ. ಮರಾಠಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಉಪಸ್ಥಿತರಿದ್ದರು.