ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಗಲಿ ಅಥವಾ ಐಪಿಎಲ್ ಆಗಲಿ, ಅವರ ಆಕ್ರಮಣಕಾರಿ ಆಟ ಶೈಲಿ ಎಲ್ಲೆಡೆ ಒಂದೇ ರೀತಿ ಕಾಣಿಸಿಕೊಳ್ಳುತ್ತದೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕೇವಲ 21 ಎಸೆತಗಳಲ್ಲಿ 52 ರನ್‌ಗಳ ಸ್ಫೋಟಕ ಅರ್ಧಶತಕ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ಇದೀಗ ಐಪಿಎಲ್ 2026ರ ಮೇಲೆ ಕಣ್ಣಿಟ್ಟಿದ್ದಾರೆ.
ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಎರಡು ಮಹತ್ವದ ಮೈಲಿಗಲ್ಲು ಸಾಧಿಸುವ ಸಾಧ್ಯತೆಯಿದೆ. ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ಪರ 74 ಪಂದ್ಯಗಳಲ್ಲಿ 96 ಸಿಕ್ಸರ್‌ಗಳನ್ನು ಬಾರಿಸಿರುವ ಅವರು, ಇನ್ನೂ 4 ಸಿಕ್ಸರ್ ಸಿಡಿಸಿದರೆ 100 ಸಿಕ್ಸರ್ ಗಡಿ ದಾಟಲಿದ್ದಾರೆ.
ಈ ಸಾಧನೆ ಮಾಡಿದರೆ ಸನ್‌ರೈಸರ್ಸ್ ಪರ 100 ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇದಕ್ಕೂ ಮೊದಲು ಈ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2014ರಿಂದ 2021ರವರೆಗೆ ಸನ್‌ರೈಸರ್ಸ್ ಪರ 95 ಪಂದ್ಯಗಳಲ್ಲಿ ಅವರು 143 ಸಿಕ್ಸರ್‌ಗಳನ್ನು ಸಿಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶನದ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ.



