ಬೆಂಗಳೂರು: ರಾಮನವಮಿ ಹಬ್ಬದ ಅಂಗವಾಗಿ ಮಾರ್ಚ್ 27ರಂದು ನಗರದಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಹೇರಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಸುತ್ತೋಲೆ ಹೊರಡಿಸಿದೆ.
ಹಿಂದೂ ಧಾರ್ಮಿಕ ಹಬ್ಬಗಳು ಮತ್ತು ಮಹಾತ್ಮರ ಜಯಂತಿಗಳ ಸಂದರ್ಭಗಳಲ್ಲಿ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಈ ರೀತಿಯ ನಿರ್ಬಂಧಗಳನ್ನು ಜಾರಿಗೊಳಿಸುವುದು ಪದ್ಧತಿಯಾಗಿದ್ದು, ಅದೇ ಹಿನ್ನೆಲೆಯಲ್ಲಿ ರಾಮನವಮಿಗೂ ಈ ಕ್ರಮ ಕೈಗೊಳ್ಳಲಾಗಿದೆ.
ಸುತ್ತೋಲೆಯಲ್ಲಿ ತಿಳಿಸಿದಂತೆ, ಜಿಬಿಎ ವ್ಯಾಪ್ತಿಯಲ್ಲಿರುವ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ, ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಾಗರಿಕರು ಮತ್ತು ವ್ಯಾಪಾರಿಗಳು ಆದೇಶವನ್ನು ಪಾಲಿಸುವಂತೆ ಹಾಗೂ ಸಹಕರಿಸುವಂತೆ ಅಪರ ನಿರ್ದೇಶಕರು (ಪಶುಪಾಲನೆ) ಮನವಿ ಮಾಡಿದ್ದಾರೆ.
ರಾಮನವಮಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳ ದಿನಗಳಲ್ಲಿ ಮಾಂಸ ಮಾರಾಟ ನಿಷೇಧಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಕಾರಣಗಳಿದ್ದು, ಇಂತಹ ನಿರ್ಬಂಧಗಳು ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಬದಲಾಗುತ್ತವೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಧಿಕಾರಿಗಳು ಆದೇಶಗಳನ್ನು ಜಾರಿಗೊಳಿಸುತ್ತಾರೆ.
ರಾಮನವಮಿಯಂದು ನಗರದಲ್ಲಿನ ಶ್ರೀರಾಮ ಮಂದಿರಗಳು, ಆಂಜನೇಯ ದೇವಾಲಯಗಳು ಹಾಗೂ ಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಬಡಾವಣೆಗಳಲ್ಲಿ ಸ್ಥಳೀಯ ಸಂಘಟನೆಗಳು ಕೋಸಂಬರಿ, ಪಾನಕ ಹಾಗೂ ಮಜ್ಜಿಗೆ ವಿತರಣೆ ಮಾಡುವುದೂ ರೂಢಿಯಾಗಿದೆ.



