ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದೀರ್ಘ ಉತ್ತರ ನೀಡಲು ಆರಂಭಿಸಿದರು. ಈ ಬಾರಿ ಬಜೆಟ್ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿದ್ದು, ಒಟ್ಟಾರೆ 24 ಗಂಟೆ 45 ನಿಮಿಷಗಳ ಕಾಲ ಚರ್ಚೆ ನಡೆದಿದೆ.
‘ನಾನು ಇದುವರೆಗೆ 17 ಬಾರಿ ಬಜೆಟ್ ಮಂಡಿಸಿ ಉತ್ತರ ನೀಡಿದ್ದೇನೆ. ಆದರೆ ಇಷ್ಟು ದೊಡ್ಡ ಮಟ್ಟದ ಚರ್ಚೆ ನಡೆದಿರುವುದು ಇದೇ ಮೊದಲ ಬಾರಿ’ ಎಂದು ಸಿಎಂ ತಿಳಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡವರ ವಿವರ ನೀಡಿದ ಸಿಎಂ, ವಿರೋಧ ಪಕ್ಷದ 21 ಸದಸ್ಯರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದ್ದಾರೆ ಎಂದು ತಿಳಿಸಿದರು. ಆಡಳಿತ ಪಕ್ಷದ ಸದಸ್ಯರು 8 ಗಂಟೆ 43 ನಿಮಿಷ ಹಾಗೂ ಜೆಡಿಎಸ್ ಸದಸ್ಯರು 2 ಗಂಟೆ 55 ನಿಮಿಷಗಳ ಕಾಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಒಬ್ಬರೇ 3 ಗಂಟೆ 6 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಅಂಕಿ-ಅಂಶ ನೀಡಿದರು.
ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ವಿಪಕ್ಷ ನಾಯಕರು ಆಳವಾದ ಅಧ್ಯಯನ ಮಾಡಿಲ್ಲ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಶೀರ್ಷಿಕೆಗಳು ಬರಲೆಂಬ ಉದ್ದೇಶದಿಂದ ಪದಗಳನ್ನು ಬಳಸಿದ್ದಾರೆ’ ಎಂದು ವ್ಯಂಗ್ಯವಾಡಿದರು. ಟೀಕೆ ಮಾಡಿದ ಆಡಳಿತ, ವಿಪಕ್ಷ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಾದ ಸೋಮಶೇಖರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಹ ಅಭಿನಂದನೆ ಸಲ್ಲಿಸಿದರು.
‘ಯಾರು ಎಷ್ಟೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ರಾಜ್ಯದ ಜನರು ಬುದ್ಧಿವಂತರಾಗಿದ್ದು, ಮಾವಿನ ಹಣ್ಣನ್ನು ಮಾವಿನ ಹಣ್ಣು ಎಂದೇ ಕರೆಯುತ್ತಾರೆ’ ಎಂದು ಹೇಳುವ ಮೂಲಕ ತಮ್ಮ ಬಜೆಟ್ ಜನಪರವಾಗಿದೆ ಎಂದು ಸಮರ್ಥಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ನಾನು ಮಾವಿನ ಹಣ್ಣು ಎಂದೇ ಹೇಳಿದ್ದೇನೆ, ಆದರೆ ಅದು ಸ್ವಲ್ಪ ಹುಳಿಯಾಗಿದೆ ಎಂದಷ್ಟೇ’ ಎಂದು ಟಾಂಗ್ ನೀಡಿದರು.
ಇನ್ನೂ, ವಿಪಕ್ಷಗಳು ಬಜೆಟ್ ಅನ್ನು ‘ಕ್ರೆಡಿಟ್ ಕಾರ್ಡ್ ಬಜೆಟ್’ ಹಾಗೂ ‘ಖಾಲಿ ಚೊಂಬು’ ಎಂದು ಟೀಕಿಸಿದ್ದಕ್ಕೆ ಸಿಎಂ ತೀಕ್ಷ್ಣವಾಗಿ ಉತ್ತರಿಸಿದರು. ‘ಇದು ಖಾಲಿ ಚೊಂಬು ಅಲ್ಲ, ಭರ್ತಿ ಚೊಂಬು. ನಮ್ಮ ಬಜೆಟ್ ತುಂಬಿದ ಕೊಡವಿನಂತೆ ಇದ್ದು, ಅದು ಎಂದಿಗೂ ಖಾಲಿಯಾಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.



