ಗದಗ: ಜಿಲ್ಲೆಯಲ್ಲಿ ಗುಡುಗು-ಗಾಳಿ ಸಹಿತ ಭಾರಿ ಮಳೆಯ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಕೆಇಬಿ ಲೈನ್ ಮನ್ ಗಳ ಸೇವಾಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ರೋಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೈಕ್ ಸವಾರರು ಮಳೆಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ವೇಳೆ, ರೋಣ ಪಟ್ಟಣದ ಹೊಳೆಅಲೂರು ಕ್ರಾಸ್ ಬಳಿ ಪೊಲೀಸ್ ಇಲಾಖೆ ಅಳವಡಿಸಿದ್ದ ಸಿಸಿ ಟಿವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್ಮನ್ಗಳು ಮಳೆಯನ್ನೇ ಲೆಕ್ಕಿಸದೆ ಕಾರ್ಯನಿರ್ವಹಿಸಿದರು.
ಸುರಕ್ಷತಾ ದೃಷ್ಟಿಯಿಂದ ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದ್ದರೂ, ಮಳೆಯಲ್ಲಿಯೇ ವಿದ್ಯುತ್ ಪರಿವರ್ತಕದ ಬಳಿ ಕೆಲಸವನ್ನು ಮುಂದುವರೆಸಿದರು.
ಮಳೆಯನ್ನೂ ಲೆಕ್ಕಿಸದೆ ಕರ್ತವ್ಯನಿಷ್ಠೆಯಿಂದ ಕೆಲಸ ನಿರ್ವಹಿಸಿದ ಲೈನ್ಮನ್ಗಳ ಸೇವಾ ಮನೋಭಾವಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



