ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಹಾಗೂ ಅಂಕಪಟ್ಟಿಯಿಂದ ಹೊರಗಿಡಬೇಕು ಎಂಬ ಕನ್ನಡ ಪರ ಸಂಘಟನೆಗಳ ಒತ್ತಾಯದ ಹಿನ್ನೆಲೆ, ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದರಿಂದ, ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ. ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಅಂಕಗಳಲ್ಲಿ ಪರಿಗಣಿಸದೆ, ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ.
ಇನ್ನು ಮುಂದೆ ತೃತೀಯ ಭಾಷೆಗಳಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ವಿಷಯಗಳ ಅಂಕಗಳನ್ನು ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಆದರೆ, ಈ ವಿಷಯಗಳ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ನಿಯಮ ಹೊಸ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
“ತ್ರಿಭಾಷಾ ನೀತಿ ಮುಂದುವರಿಯುತ್ತದೆ. ಆದರೆ, ಎಸ್ಎಸ್ಎಲ್ಸಿಯಲ್ಲಿ ಹಿಂದಿ ವಿಷಯದ ಅಂಕಗಳನ್ನು ಗ್ರೇಡ್ ರೂಪದಲ್ಲಿ (A, B, C, D) ನೀಡಲಾಗುತ್ತದೆ. ಒಟ್ಟು ಫಲಿತಾಂಶವನ್ನು 525 ಅಂಕಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆ” ಎಂದು ಹೇಳಿದರು.
ಈಗವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ 625 ಅಂಕಗಳಿಗೆ ನಡೆಯುತ್ತಿತ್ತು. ಇನ್ನು ಮುಂದೆ ಹಿಂದಿ ವಿಷಯದ 100 ಅಂಕಗಳನ್ನು ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಈ ಬದಲಾವಣೆಗಳಿಂದ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಉಳಿದ ತರಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.



