ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳಿಗೆ ಸದ್ಯಕ್ಕೆ ಡೀಸೆಲ್ ಕೊರತೆ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೂ ತಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ. ಡೀಸೆಲ್ ಪೂರೈಕೆ ಸರಾಗವಾಗಿದ್ದು, ಜನರು ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಕರಗ ಉತ್ಸವದ ಸಿದ್ಧತೆಗಳ ಕುರಿತು ಮಾತನಾಡಿದ ಸಚಿವರು, ಏಪ್ರಿಲ್ 1ರಂದು ಮಧ್ಯರಾತ್ರಿ 12:30ಕ್ಕೆ ಕರಗ ಆಚರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಅವರು ಆಗಮಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಅವರಿಗೆ ಕೂಡ ಆಹ್ವಾನ ನೀಡಲಾಗುತ್ತಿದೆ. ಈ ಬಾರಿ ಕರಗ ಉತ್ಸವಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಎಲ್ಲ ವಿಧಿವಿಧಾನಗಳ ಸಿದ್ಧತೆ ಪೂರ್ಣಗೊಂಡಿದೆ ಎಂದು ಹೇಳಿದರು.
ಉತ್ಸವದ ವೇಳೆ ಯಾವುದೇ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. 24 ಗಂಟೆಗಳ ಕಾಲ ಕಸ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳ ಜನರು ಕರಗ ಉತ್ಸವವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕರೆ ನೀಡಿದರು.



