ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಾಗೇಹಳ್ಳದ ಬಳಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಬಸ್, ಕಾಗೇಹಳ್ಳದ ಬಳಿ ಇಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ ಚಾಲಕ ಹಾಗೂ ಕಂಡಕ್ಟರ್ ಸೇರಿದಂತೆ ಒಟ್ಟು 35 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಅಪಘಾತದಲ್ಲಿ ಮೂವರು ಪ್ರಯಾಣಿಕರಿಗೆ ಕೈ ಮತ್ತು ಕಾಲು ಮುರಿದು ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅತಿವೇಗ ಮತ್ತು ನಿಯಂತ್ರಣ ಕಳೆದುಕೊಂಡದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.



