ಇಸ್ಲಾಮಾಬಾದ್: ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಅನ್ವರ್ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜಾಮಿಯಾ ಮಸೀದಿ ಉಸ್ಮಾನ್ ವಾಲಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಆದರೆ, ಅವರ ಸಾವಿನ ನಿಖರ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ವರದಿಗಳ ಪ್ರಕಾರ, ಅನ್ವರ್ ಮಸೂದ್ ಅಜರ್ ಅವರ ಐದು ಸಹೋದರರಲ್ಲಿ ಒಬ್ಬನಾಗಿದ್ದು, ಜೈಶ್-ಎ-ಮೊಹಮ್ಮದ್ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ. ಸಂಘಟನೆಯ ವಿವಿಧ ಚಟುವಟಿಕೆಗಳಲ್ಲಿ ಆತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನು ಎಂದು ತಿಳಿದುಬಂದಿದೆ.
ಇನ್ನು, ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ವೇಳೆ ತನ್ನ ಕುಟುಂಬದ 10 ಸದಸ್ಯರು ಹಾಗೂ ನಾಲ್ವರು ಸಹಚರರು ಸಾವನ್ನಪ್ಪಿದ್ದಾರೆ ಎಂದು ಮಸೂದ್ ಅಜರ್ ಹೇಳಿಕೊಂಡಿದ್ದ.
1994ರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾದ ಮಸೂದ್ ಅಜರ್, ಬಳಿಕ ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣ ಪ್ರಕರಣದ ನಂತರ ಬಿಡುಗಡೆಗೊಂಡಿದ್ದ. ಅವರ ಹೇಳಿಕೆಯ ಪ್ರಕಾರ, ಬಹಾವಲ್ಪುರದಲ್ಲಿರುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನ ಜೆಇಎಂ ಪ್ರಧಾನ ಕಚೇರಿ ಮೇಲಿನ ದಾಳಿಯಲ್ಲಿ ಕುಟುಂಬದ ಅನೇಕ ಸದಸ್ಯರು ಮೃತಪಟ್ಟಿದ್ದರು.



