ಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಕಂಪನಿಯ ಮ್ಯಾನೇಜರ್‌ನ್ನು ಚಾಕುವಿನಿಂದ ಹತ್ಯೆ ಮಾಡಿದ ಭೀಕರ ಘಟನೆ ತಿಗಳರಪಾಳ್ಯದಲ್ಲಿ ನಡೆದಿದೆ.
ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ರಾಹುಲ್ (38) ಹತ್ಯೆಯಾದ ವ್ಯಕ್ತಿ. ಯಾದಗಿರಿ ಮೂಲದ ಹನುಮಂತಪ್ಪ ಎಂಬಾತ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉದ್ಯೋಗದಿಂದ ವಜಾಗೊಂಡಿದ್ದಕ್ಕೆ ಕೋಪಗೊಂಡ ಹನುಮಂತಪ್ಪ, ಮಾರ್ಚ್ 30ರಂದು ಕಂಪನಿಯಲ್ಲೇ ಮ್ಯಾನೇಜರ್ ರಾಹುಲ್ ಮೇಲೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತೀವ್ರ ರಕ್ತಸ್ರಾವದಿಂದ ರಾಹುಲ್ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ಪ್ರಯತ್ನಗಳ ನಡುವೆಯೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸರು ಆರೋಪಿ ಹನುಮಂತಪ್ಪನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.



