ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸೇರಿದ ಹೈದರಾಬಾದ್ನ ನಿವಾಸವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಹಲವು ವರ್ಷಗಳಿಂದ ಸುಮಾರು 1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
2016ರಲ್ಲಿ ನಿಧನರಾದ ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ತೆರಿಗೆ ಪಾವತಿಸಲು ಅನೇಕ ಬಾರಿ ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ಕಾಲೊನಿಯ ಈ ಆಸ್ತಿ 2017ರಿಂದಲೇ ಬಾಕಿದಾರರ ಪಟ್ಟಿಯಲ್ಲಿ ಇದ್ದು, ಫೆಬ್ರವರಿಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಮನೆಯನ್ನು ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರಿಗೆ ಬಾಡಿಗೆಗೆ ನೀಡಲಾಗಿತ್ತು. ಆ ಅವಧಿಯಿಂದಲೇ ತೆರಿಗೆ ಬಾಕಿ ಹೆಚ್ಚಾಗತೊಡಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮಾರ್ಚ್ 31ರೊಳಗೆ ಪ್ರಮುಖ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು GHMC ಆಯುಕ್ತರು ತಿಳಿಸಿದ್ದಾರೆ.



