ಇಂದು ರಾಜ್ಯ ಸರ್ಕಾರದಿಂದ ಐತಿಹಾಸಿಕ ವಿಧೇಯಕ ಮಂಡನೆ : ಸಚಿವ ಶ್ರೀರಾಮುಲು

Vijayasakshi (Gadag News) :
  • ಉಭಯ ಸದನಗಳಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ

ವಿಜಯಸಾಕ್ಷಿ ಸುದ್ದಿ, ಗದಗ:

‘ಇಂದು ಮುಖ್ಯಮಂತ್ರಿಗಳು, ಕಾನೂನು ಸಚಿವರು ಉಭಯ ಸದನಗಳಲ್ಲಿ ಐತಿಹಾಸಿಕ ಮತಾಂತರ ನಿಷೇಧ ವಿಧೇಯಕ ಮಂಡಿಸಲಿದ್ದಾರೆ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಗದಗನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಆಸೆ, ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡಬಾರದು ಎಂಬ ಕಾರಣದಿಂದ ಕಾಯ್ದೆ ಜಾರಿಯಾಗಲಿದೆ. ಯಾರೇ ಆಗಿದ್ದರೂ ಉಡುಗೊರೆ, ಉದ್ಯೋಗ, ಹಣ, ಇನ್ನಿತರ ಭರವಸೆಗಳನ್ನು ನೀಡಿ ಕಾನೂನು ಬಾಹಿರ ಕೆಲಸ ಮಾಡುವವರಿಗೆ ಜನರು ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುವುದು. ಒಂದು ವೇಳೆ ಬಲವಂತವಾಗಿ ಮತಾಂತರ ಮಾಡಿದಲ್ಲಿ 3 ರಿಂದ 10 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಕಾನೂನಿನಲ್ಲಿ ಪ್ರಸ್ತಾಪವಿದೆ’ ಎಂದು ತಿಳಿಸಿದರು.

‘ಎಂಇಎಸ್ ಮಹಾ ಎಡವಟ್ಟು ಸಂಘವಾಗಿದ್ದು,
ಅವರ ಪುಂಡಾಟಕ್ಕೆ ಹೇಡಿ ಕೃತ್ಯಗಳಿಗೆ, ಆಟಗಳಿಗೆ ರಾಜ್ಯ ಸರ್ಕಾರ ಗೂಂಡಾ ಕಾಯ್ದೆ ಹಾಕುವ ನಿರ್ಧಾರ ತೆಗೆದುಕೊಂಡಿದೆ. ಎಂಇಎಸ್ ನವರದ್ದು ಇದೇ ಮೊದಲಲ್ಲ, ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂತಹ ಹೇಡಿ ಕೃತ್ಯ ಎಸಗುತ್ತಿದ್ದು, ಕೃತ್ಯ ಎಸಗಿದವರ ವಿರುದ್ಧ ಗೂಂಡಾ ಕಾಯ್ದೆ ಮೂಲಕ ಸರ್ಕಾರ ಪ್ರತ್ಯುತ್ತರ ನೀಡುತ್ತಿದೆ. ಅಲ್ಲದೇ, ಎಂಇಎಸ್ ಬ್ಯಾನ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ತಜ್ಞರ ಜೊತೆ ಪರಾಮರ್ಶಿಸುತ್ತಿದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಕನ್ನಡ ನಾಡು-ನುಡಿ ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಂಗೊಳ್ಳಿ ರಾಯಣ್ಣ ಅವರ ವಿಗ್ರಹವನ್ನು ಧ್ವಂಸಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಎಂಇಎಸ್ ಈ ರೀತಿ ಮಾಡಲು ಬಿಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಕೆಸರೆರಚಾಟ ನಡೆಸುವ ಬದಲು ಪ್ರತಿಯೊಬ್ಬರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಸಚಿವ ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರವಿ ದಂಡಿನ, ಎಸ್.ಎಚ್.ಶಿವನಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ