ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತು ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ.
ಗಿಡಗಳು ಪ್ರಕೃತಿಯ ಸಂಕೇತವಾಗಿದ್ದರೂ, ಕೆಲವು ನಿರ್ದಿಷ್ಟ ಗಿಡಗಳನ್ನು ಮನೆಯೊಳಗೆ ಅಥವಾ ಆವರಣದಲ್ಲಿ ಬೆಳೆಸುವುದು ಅಶುಭವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮುಳ್ಳಿನ ಗಿಡಗಳು:
ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಇಡಬಾರದು. ಕಳ್ಳಿ ಗಿಡ ಅಥವಾ ಕ್ಯಾಕ್ಟಸ್ನಂತಹ ಮುಳ್ಳಿನ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂದು ನಂಬಲಾಗಿದೆ. ಇವು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ, ಜಗಳ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದರೆ, ಗುಲಾಬಿ ಗಿಡವನ್ನು ಇದಕ್ಕೆ ಹೊರತಾಗಿ ನೋಡಲಾಗುತ್ತದೆ; ಇದನ್ನು ಮನೆಯ ಹೊರಗಿನ ಅಂಗಳದಲ್ಲಿ ಬೆಳೆಸಬಹುದು.
ಬೋನ್ಸಾಯ್ ಗಿಡಗಳು:
ಬೋನ್ಸಾಯ್ ಗಿಡಗಳು “ಕುಂಠಿತ ಬೆಳವಣಿಗೆ” ಪ್ರತಿನಿಧಿಸುತ್ತವೆ. ದೊಡ್ಡ ಮರವನ್ನು ಕೃತಕವಾಗಿ ಚಿಕ್ಕದಾಗಿಸುವುದರಿಂದ, ಮನೆಯ ಸದಸ್ಯರ ವೃತ್ತಿಜೀವನ ಮತ್ತು ವೈಯಕ್ತಿಕ ಪ್ರಗತಿಗೆ ಅಡ್ಡಪರಿಣಾಮ ಬೀರಬಹುದು.
ಹಾಲಿನಂತಹ ದ್ರವ ಹೊಡೆಯುವ ಗಿಡಗಳು:
ಎಲೆ ಅಥವಾ ಕೊಂಬೆಯನ್ನು ಮುರಿದಾಗ ಹಾಲಿನಂತಹ ಬಿಳಿ ದ್ರವ ಹೊರಬರುವ ಗಿಡಗಳನ್ನು ಮನೆಯಲ್ಲಿ ಇಡಬಾರದು. ಇವು ಶಾಂತಿ, ನೆಮ್ಮದಿ ಹಾಗೂ ಆರ್ಥಿಕ ಸ್ಥಿತಿಗೆ ಹಾನಿ ಮಾಡಬಹುದು.
ರಬ್ಬರ್ ಮತ್ತು ಇತರ ಗಿಡಗಳು:
ರಬ್ಬರ್ ಗಿಡವನ್ನು ಮನೆಯ ಹೊರಗೆ ಇಡುವುದು ಉತ್ತಮ, ಆದರೆ ಪ್ರವೇಶ ದ್ವಾರ ಅಥವಾ ಬೆಡ್ರೂಮ್ನಲ್ಲಿ ಬೇಡ. ಒಣಗಿದ ಅಥವಾ ಬಾಡಿಹೋದ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ.
ಮನೆಯ ಹತ್ತಿರ ಬೆಳೆದಾಗ ಹಾನಿ ಮಾಡುವ ಗಿಡಗಳು:
ಹುಣಸೆ ಮರ ಮತ್ತು ಖರ್ಜೂರದ ಮರಗಳನ್ನು ಮನೆಯ ತೀರ ಹತ್ತಿರದಲ್ಲಿ ಬೆಳೆಸಬಾರದು. ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆಯೆಂದು, ಖರ್ಜೂರ ಮರವು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.



