ಬೆಂಗಳೂರು: ರೌಡಿಶೀಟರ್‌ರಿಂದ “ಪಬ್ಲಿಕ್ ಪ್ರೆಸ್ ಆರ್ಮಿ” ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಲಾಗಿದೆ ಎಂಬ ಆರೋಪದ ಪ್ರಕರಣವನ್ನು ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡುವಂತೆ ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಹಾಗೂ ಆಶಿಯಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
“ಪಬ್ಲಿಕ್ ಪ್ರೆಸ್ ಆರ್ಮಿ” ಎಂಬ ಟ್ರಸ್ಟ್ ಸ್ಥಾಪಿಸಲು ನಿಮಗೆ ಅಧಿಕಾರ ನೀಡಿದವರು ಯಾರು? ಈ ರೀತಿಯ ಸಂಘಟನೆಗೆ ಕಾನೂನುಬದ್ಧ ಮಾನ್ಯತೆ ಏನು?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ಜೊತೆಗೆ, ಇಂತಹ ಟ್ರಸ್ಟ್‌ಗೆ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಆರೋಪಿಗಳು “ಪಬ್ಲಿಕ್ ಪ್ರೆಸ್ ಆರ್ಮಿ” ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿ, ಯುವಕರನ್ನು ಪ್ರಚೋದನೆಗೊಳಿಸಿ, ತಮ್ಮನ್ನು ಸಾರ್ವಜನಿಕ ಅಧಿಕಾರಿಗಳಂತೆ ತೋರಿಸಿಕೊಂಡಿದ್ದರು. ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎಂದು ಸುಳ್ಳು ಹೇಳಿ ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದರು ಎಂಬ ಆರೋಪಗಳಿವೆ.
ಈ ಹಿನ್ನೆಲೆಯಲ್ಲಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಾಗಿತ್ತು. ಇದೀಗ ಹೈಕೋರ್ಟ್ ತೀರ್ಪಿನಿಂದ ಪ್ರಕರಣದ ತನಿಖೆಗೆ ಮುಂದುವರಿಯಲು ಹಸಿರು ನಿಶಾನೆ ದೊರೆತಿದೆ.



