ಬೆಂಗಳೂರು: ನಗರದ ಕೊತ್ತನೂರು ವ್ಯಾಪ್ತಿಯ ಭಾರತಿ ಸಿಟಿಯಲ್ಲಿರುವ ಕಾಫಿ ಶಾಪ್ ಬಳಿ ಡ್ರಗ್ಸ್ ಸೇವನೆ ಆರೋಪ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ನಿನ್ನೆ ರಾತ್ರಿ ಗಲಾಟೆ ಸಂಭವಿಸಿದೆ.
ಮಾಹಿತಿ ಪ್ರಕಾರ, ಹೆಣ್ಣೂರು ಭಾಗದಿಂದ ಬಂದಿದ್ದ ಕೆಲ ಯುವಕರು ಕಾಫಿ ಶಾಪ್ ಬಳಿ ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದರೆಂದು ಆರೋಪಿಸಲಾಗಿದೆ. ಈ ದೃಶ್ಯವನ್ನು ಸಿಸಿ ಕ್ಯಾಮೆರಾಗಳಲ್ಲಿ ಗಮನಿಸಿದ ಹೋಟೆಲ್ ಸಿಬ್ಬಂದಿ, ಯುವಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ಹೋಟೆಲ್ಗೆ ಬರಬಾರದು ಎಂದು ಯುವಕರ ಸಂಬಂಧಿಕರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ವಿಷಯದಿಂದ ಕೆರಳಿದ ಯುವಕರ ಗುಂಪು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ. ಪ್ರತಿಯಾಗಿ ಸಿಬ್ಬಂದಿಯೂ ತಿರುಗೇಟು ನೀಡಿದ್ದು, ಎರಡೂ ಪಾಳಯಗಳ ನಡುವೆ ಗಲಾಟೆ ತೀವ್ರಗೊಂಡಿದೆ.
ಗಲಾಟೆಯ ವೇಳೆ ಕುರ್ಚಿ ಸೇರಿದಂತೆ ಕೈಗೆ ಸಿಕ್ಕಸಿಕ್ಕ ವಸ್ತುಗಳನ್ನು ಬಳಸಿ ಪರಸ್ಪರ ಹೊಡೆದಾಡಿಕೊಂಡಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



