ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 15ಕ್ಕೆ ಮುಂದೂಡಿದೆ.
ಸ್ವತಂತ್ರ ಅಭ್ಯರ್ಥಿ ಗೌತಮ್ ಕುಮಾರ್ ಯು. ಜೈನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಕಳೆದ ಆರು ತಿಂಗಳಿನಿಂದ ಹಣ ಬಿಡುಗಡೆ ಮಾಡಲಾಗಿಲ್ಲ. ಇದೀಗ ಉಪಚುನಾವಣೆ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಹಣ ನೀಡಲಾಗುತ್ತಿರುವುದು ಸರಿಯಲ್ಲ ಎಂದು ವಾದಿಸಿದರು.
ಉಚಿತ ಸೌಲಭ್ಯಗಳು ದೇಶದ ಅಭಿವೃದ್ಧಿಗೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನೂ ಉಲ್ಲೇಖಿಸಿ, ಉಪಚುನಾವಣೆ ಮುಗಿಯುವವರೆಗೆ ಗೃಹಲಕ್ಷ್ಮಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆ ಮಾಡಬಾರದು ಎಂದು ಕೋರಿದರು.
ಇದಕ್ಕೆ ಪ್ರತಿಯಾಗಿ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ನಿಯಮಿತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಕೆಲ ತಿಂಗಳಲ್ಲಿ ವ್ಯತ್ಯಾಸವಾಗಿರಬಹುದು, ಆದರೆ ಯಾವುದೇ ಬಾಕಿ ಉಳಿದಿಲ್ಲ. ಅರ್ಜಿದಾರರು ತಪ್ಪು ಮಾಹಿತಿ ನೀಡುತ್ತಿರುವುದರಿಂದ ಅರ್ಜಿಯನ್ನು ವಜಾಗೊಳಿಸಿ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.
ಎರಡೂ ಪಾಳಯಗಳ ವಾದಗಳನ್ನು ಆಲಿಸಿದ ನ್ಯಾಯಪೀಠ, ಸರ್ಕಾರ ಈಗಾಗಲೇ ನೀತಿಗಳನ್ನು ಜಾರಿಗೊಳಿಸಿದ್ದು ಅವನ್ನು ಮುಂದುವರಿಸುತ್ತಿದೆ. ಈ ಹಂತದಲ್ಲಿ ನ್ಯಾಯಾಲಯದ ಯಾವುದೇ ಹಸ್ತಕ್ಷೇಪವು ತುಳಿತಕ್ಕೊಳಗಾದ ವರ್ಗಗಳಿಗೆ ಹಾನಿ ಉಂಟುಮಾಡಬಹುದು ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿತು.



