ವಿಜಯಸಾಕ್ಷಿ ಸುದ್ದಿ, ಗದಗ:

ಇತ್ತೀಚೆಗೆ ಮದುವೆ, ಇತರ ಶುಭ ಸಮಾರಂಭಗಳಲ್ಲಿ ಕತ್ತಿ (ತಲ್ವಾರ್) ಝಳಪಿಸುವುದು, ತಲ್ವಾರ್‌ನಿಂದ ಬರ್ತಡೇ ಕೇಕ್ ಕಟ್ ಮಾಡುವುದು ಫ್ಯಾಶನ್ ಆಗಿ ಬಿಟ್ಟಿದೆ. ತಿಳಿದೋ ತಿಳಿಯದೆಯೋ ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳೇ ಈ ರೀತಿ ಕತ್ತಿ ಝಳಪಿಸುತ್ತಿರುವುದು ದುರಂತ. ಕಾಂಗ್ರೆಸ್ ಅಭ್ಯರ್ಥಿಯೇ ಗದಗ ನಗರದಲ್ಲಿ ಕತ್ತಿ ಝಳಪಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಗದಗ-ಬೆಟಗೇರಿ ನಗರಸಭೆ ಚುನಾವಣೆಯ 18ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಜೂನ್‌ಸಾಬ ಉರ್ಫ್ ಜೈನುಲಾಬ್ದೀನ್ ರಹಿಮಾನಸಾಬ ನಮಾಜಿ ಎಂಬ ವ್ಯಕ್ತಿ ಗದಗನ ಜವಳ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಕತ್ತಿ ಝಳಪಿಸಿರುವ ವಿಡಿಯೋ ವೈರಲ್ ಆಗಿದ್ದು, ಅವಳಿ ನಗರದಲ್ಲಿ ಭೀತಿ ಹುಟ್ಟಿಸಿದೆ.
ಟಿಪ್ಪು ಜಯಂತಿಯ ಸಂದರ್ಭದಲ್ಲಿ ಈ ತಲ್ವಾರ್ ಡ್ಯಾನ್ಸ್ ನಡೆದಿದೆ ಎನ್ನಲಾಗುತ್ತಿದೆ. ರಾತ್ರಿಹೊತ್ತು ಡಿಜೆ ಹಾಡಿಗೆ ಹೆಜ್ಜೆ ಹಾಕಿರುವ ಜೂನ್‌ಸಾಬ ಕ್ಯಾಬರೆ ಡಾನ್ಸರ್‌ಗಳು ನಾಚುವಂತೆ ಕತ್ತಿ ಝಳಪಳಿಸುತ್ತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಜೂನ್‌ಸಾಬ ನೃತ್ಯ ಮಾಡಿರುವ ವಿಡಿಯೋವನ್ನು ಅಲ್ಲಿನ ಯುವಕನೋರ್ವ ವಾಟ್ಸ್ ಆಪ್‌ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದು, ಬಳಿಕ ಅವಳಿ ನಗರದೆಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಗರಸಭೆಯ ಮಾಜಿ ಉಪಾಧ್ಯಕ್ಷೆಯ ಪತಿಯಾಗಿರುವ ಜೂನ್‌ಸಾಬ ನಮಾಜಿ ಹಾಗೂ ಆತನ ಹಿಂಬಾಲಕರು ಕೈಯಲ್ಲಿ ಕತ್ತಿ ಹಿಡಿದು ಕುಣಿದಿದ್ದಾರೆ. ಇದರಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ಜನಪ್ರನಿಧಿಯಾಗಲು ಹೊರಟಿರುವವರು ಇವರೇನಾ ಎಂದು ಬಾಯಿ ಮೇಲೆ ಬೆರಳಿಡುವಂತಾಗಿದೆ.

ಈ ಬಗ್ಗೆ ‘ವಿಜಯಸಾಕ್ಷಿ‘ ಸಂಪರ್ಕಿಸಿದಾಗ, ‘ಕತ್ತಿ ಝಳಪಳಿಸಿರುವ ವಿಡಿಯೋ ಆರು ವರ್ಷಗಳ ಹಿಂದೆ ರಕ್ತ ಮಾರೆಮ್ಮದೇವಿ ದೇವಸ್ಥಾನದ ಹಿಂದೆ ಕುಣಿದಿರುವುದಾಗಿದೆ. ಆ ಮೇಲೆ ಈದ್ ಮಿಲಾದ್‌ನಲ್ಲಿ ಕುಣಿದಿರುವುದು. ಆದರೆ, ಕೆಲವರು ಮದುವೆ ಇದ್ದಾಗ, ಕ್ರಿಕೆಟ್‌ನಲ್ಲಿ ಸೋತಾಗ ಕುಣಿದಿರುವ ವಿಡಿಯೋ ಅಂತಾ ಹೇಳಿದ್ರು. ನಾನು ಎಂತಹ ದೇಶಭಕ್ತ ಎಂಬುದನ್ನು ಅವರಿಗೆ ಹೇಳಿದ್ದೇನೆ.

ನಾನು ಕುಣಿಯುವ ವೇಳೆ ಹಿಂದೂ, ಎಸ್‌ಸಿ, ಎಸ್‌ಟಿ, ಲಿಂಗಾಯತ, ಬ್ರಾಹ್ಮಣರೂ ಇದ್ದರು. ಅಲ್ಲಿ ಯಾರ್ಯಾರು ಇದ್ದರು ಎಂಬ ಬಗ್ಗೆ ಸ್ಟೇಷನ್‌ನಲ್ಲಿ ಮಾಹಿತಿ ಕೊಟ್ಟಿದ್ದೀನಿ. ನಾನು ಎಲೆಕ್ಷನ್‌ಗೆ ಬಂದಾಗ ಒಂದು ಸಾರಿ ಈ ರೀತಿ ವಿಡಿಯೋ ವೈರಲ್ ಮಾಡ್ತಾರೆ. ನಾನು ಹೇಗಿದ್ದೇನೆ ಎಂಬುದನ್ನು ನಮ್ಮ ಏರಿಯಾದಲ್ಲಿ ಬಂದು ಕೇಳಿ. ವಿಪಕ್ಷದವರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ನಮ್ಮ ಪಕ್ಷದವರೂ ಸೇರಿ ಹೀಗೆ ಮಾಡುತ್ತಿದ್ದಾರೆ. ಆದರೂ ಚುನಾವಣೆಯಲ್ಲಿ ನಾನೇ ಗೆಲ್ಲುತ್ತೇನೆ ಎಂದು ಜೂನ್‌ಸಾಬ ಸ್ಪಷ್ಟನೆ ನೀಡಿದರು.
ಪ್ರಕರಣ ದಾಖಲು
ಮೂರು ವರ್ಷಗಳ ಹಿಂದಿನ ವಿಡಿಯೋ ಅದು. ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ ಅಂತಾ ಅವಾಗಲೇ ದೂರು ಕೊಟ್ಟು ಎಫ್‌ಐಆರ್ ಆಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.