ಬೆಂಗಳೂರು: ನಗರದ ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸುರೇಶ್ ಗುರುವಾರದಿಂದಲೇ ಕಾಣೆಯಾಗಿದ್ದು, ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಹೆಚ್‌ಎಸ್‌ಆರ್ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಇಂದು ಬೆಳಿಗ್ಗೆ ಕಬ್ಬನ್ ಪಾರ್ಕ್‌ನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ದೊರೆತ ಐಡಿ ಕಾರ್ಡ್‌ನ ಆಧಾರದ ಮೇಲೆ ಅವನ ಗುರುತು ಪತ್ತೆಯಾಗಿದೆ. ಆತ ಬೆಂಗಳೂರಿನ ಎಸ್‌ಪಿ ರಸ್ತೆ ಪ್ರದೇಶದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎಂಬುದು ತಿಳಿದುಬಂದಿದೆ.
ಮೃತನ ಬಳಿ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

