ಶಿವಮೊಗ್ಗ: ಕಳೆದ ಮಾ.29ರಂದು ಹೊಡಬಟ್ಟೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ 4 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
30 ವರ್ಷದ ಶ್ವೇತಾ ಮೃತ ಮಹಿಳೆ. ಆತ್ಮಹತ್ಯೆಗೆ ಯತ್ನಿಸಿದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೀಗ ಮೃತಪಟ್ಟಿದ್ದಾರೆ.
ಸ್ಟಾಫ್ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಶ್ವೇತಾ ಅತ್ತೆ ಮತ್ತು ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಘಟನೆ ಸಂಬಂಧ ಸೊರಬ ಠಾಣೆಗೆ ದೂರು ಕೂಡ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್, ದಿವ್ಯಾ ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶ್ವೇತಾ ಪೋಷಕರ ಆಗ್ರಹಿಸಿದ್ದು ತನಿಖೆ ಮುಂದುವರಿದಿದೆ. ಇನ್ನು ಮಗಳ ಸಾವಿಗೆ ಶ್ವೇತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.



