ಚಿಕ್ಕಮಗಳೂರು: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಕುರಿಗಾಯಿ ಯುವಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಮಾರ್ (26) ಮೃತಪಟ್ಟ ದುರ್ದೈವಿ. ಈತ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿ ಎನ್ನಲಾಗಿದೆ. ಮೃತ ಕುಮಾರ್ ಕಡೂರು ತಾಲ್ಲೂಕಿನ ಬೋರಗಾನಹಳ್ಳಿಯ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿ ಮಂದೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಾಮನವಮಿ ಹಬ್ಬಕ್ಕೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕುಮಾರ್, ಮದುವೆ ಮಾಡಿಸಿ ಕೊಡುವಂತೆ ಪೋಷಕರ ಬಳಿ ಪಟ್ಟು ಹಿಡಿದಿದ್ದ. ಆದರೆ, ಪೋಷಕರು ಮೊದಲು ಇಬ್ಬರು ಅಣ್ಣಂದಿರ ಮದುವೆಯಾಗಲಿ, ನಂತರ ನಿನಗೆ ಮದುವೆ ಮಾಡುತ್ತೇವೆ ಎಂದು ತಿಳಿಸಿದ್ದರು.
ಅಲ್ಲಿಯವರೆಗೆ ಕುರಿ ಮೇಯಿಸಿಕೊಂಡು ಇರುವಂತೆ ಸೂಚಿಸಿ ಮಗನನ್ನು ವಾಪಸ್ ಕಳುಹಿಸಿದ್ದರು. ಆದರೆ, ತನಗೆ ಮದುವೆಯಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದ ಕುಮಾರ್, ಮಾನಸಿಕವಾಗಿ ಜಿಗುಪ್ಸೆಗೆ ಒಳಗಾಗಿದ್ದ. ಇದೇ ವಿಚಾರವಾಗಿ ಮನನೊಂದು ಕುಡಿದ ಮತ್ತಿನಲ್ಲಿ ತೋಟದ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



