ಕಾರವಾರ: ಕೊಟ್ಟ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ ಕಾರಣಕ್ಕೆ ಮಹಿಳೆಯರ ಮೇಲೆ ಗ್ಯಾಂಗ್ ದಾಳಿ ನಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೆಹರು ನಗರದಲ್ಲಿ ಬೆಳಕಿಗೆ ಬಂದಿದೆ.
ಯಲ್ಲಾಪುರದ ನಿವಾಸಿಗಳಾದ ಆಯಿಷಾ ಮತ್ತು ಗೀತಾ ಅವರ ಮೇಲೆ ಮೊಹಮ್ಮದ್ ಸಲ್ಮಾನ್ ಹಾಗೂ ಅವನ ಸಂಗಡಿಗರು ಕ್ರೂರವಾಗಿ ಹಲ್ಲೆ ನಡೆಸಿದರೆಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆಯಿಷಾ ಅವರು ಅಂಗಡಿ ಆರಂಭಿಸಲು ಸಲ್ಮಾನ್‌ಗೆ ಸುಮಾರು 3.80 ಲಕ್ಷ ರೂಪಾಯಿ ನೀಡಿದ್ದರು. ನಂತರ ಕುಟುಂಬದ ಅನಿವಾರ್ಯ ಪರಿಸ್ಥಿತಿಯಿಂದ ಹುಬ್ಬಳ್ಳಿಗೆ ತೆರಳಿದ್ದ ಅವರು, ಎರಡು ತಿಂಗಳ ಬಳಿಕ ಮರಳಿ ಬಂದಾಗ ಸಲ್ಮಾನ್ ಯಲ್ಲಾಪುರವನ್ನು ತೊರೆದು ಶಿರಸಿಯಲ್ಲಿ ವ್ಯಾಪಾರ ನಡೆಸುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಅವರು ನೇರವಾಗಿ ಶಿರಸಿಗೆ ತೆರಳಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾರೆ.
ಆದರೆ ಈ ವಿಚಾರವಾಗಿ ಮಾತುಕತೆ ನಡೆಯುತ್ತಿದ್ದ ವೇಳೆ ಪರಿಸ್ಥಿತಿ ಏಕಾಏಕಿ ತೀವ್ರಗೊಂಡಿದ್ದು, ನಾಲ್ಕು ರಿಂದ ಐದು ಜನರ ಗುಂಪು ಸ್ಥಳಕ್ಕೆ ಬಂದು ಮಹಿಳೆಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗ ಥಳಿಸಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳೆಯರ ಮೇಲೆ ಅಸಭ್ಯವಾಗಿ ವರ್ತಿಸಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಲಾಗಿದೆ ಎಂಬುದೂ ತಿಳಿದುಬಂದಿದೆ.
ಇನ್ನಷ್ಟು ಆತಂಕಕಾರಿ ಅಂಶವೆಂದರೆ, ಸಂತ್ರಸ್ತೆಯ ಪ್ರಕಾರ ಯುಪಿ ಮತ್ತು ಬಿಹಾರ ಮೂಲದ ಕೆಲವರು ಕಳೆದ 18 ರಿಂದ 20 ವರ್ಷಗಳಿಂದ ಯಲ್ಲಾಪುರದಲ್ಲಿ ನೆಲೆಸಿದ್ದು, ಸಲೂನ್ ವ್ಯವಹಾರದಲ್ಲಿ ಪಾಲುದಾರರಾಗುವಂತೆ ನಂಬಿಸಿ ಹಣ ಪಡೆದಿದ್ದರು. ನಂತರ ಶಾಪ್ ಆರಂಭಿಸಿ, ಅಚಾನಕ್ ಅದನ್ನು ಮುಚ್ಚಿ ಹಲವು ಕಡೆ ಸಾಲ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳೆ ಹಿಂದೆಲೇ ಪೊಲೀಸರಿಗೆ ದೂರು ನೀಡಿದ್ದರು. ಆ ಸಮಯದಲ್ಲಿ ಹಣ ಹಿಂತಿರುಗಿಸುವ ಭರವಸೆ ನೀಡಿದ್ದರೂ, ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಇತ್ತೀಚೆಗೆ ಅವರು ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಸಂತ್ರಸ್ತೆಯರು ಅಲ್ಲಿಗೆ ತೆರಳಿ ವಿಚಾರಿಸಿದಾಗ, ಸಲ್ಮಾನ್‌ನ ಸಹೋದರನ ಸಂಪರ್ಕದಲ್ಲಿ ಈ ಘಟನೆ ನಡೆದಿದ್ದು, ಕೊನೆಗೆ ಗ್ಯಾಂಗ್ ದಾಳಿ ರೂಪ ಪಡೆದುಕೊಂಡಿದೆ ಎನ್ನಲಾಗಿದೆ.



