ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿ ಮಹಿಳೆಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ಚಾಟ್ ಮೂಲಕ ವಿವಾಹಿತ ಮಹಿಳೆಗೆ ಪರಿಚಯವಾದ ಆರೋಪಿಗಳು, ನಂತರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಕಾಲ್ ಮತ್ತು ಚಾಟಿಂಗ್ ಆರಂಭಿಸಿದ್ದರು. ಬಳಿಕ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ಮಹಿಳೆಯ ಖಾಸಗಿ ಕ್ಷಣಗಳನ್ನು ಸ್ಕ್ರೀನ್ಶಾಟ್ ತೆಗೆದು ಸಂಗ್ರಹಿಸಿಕೊಂಡಿದ್ದರು.
ಈ ಚಿತ್ರಗಳು ಮತ್ತು ವಿಡಿಯೋಗಳನ್ನು ಮಹಿಳೆಯ ಗಂಡ, ಕುಟುಂಬದವರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಸಿ, ಆರೋಪಿಗಳು ಹಂತ ಹಂತವಾಗಿ ಹಣ ಮತ್ತು ಚಿನ್ನಾಭರಣ ಪಡೆದುಕೊಂಡಿದ್ದಾರೆ.
ಆರೋಪಿಗಳ ಕಾಟಕ್ಕೆ ಬೇಸತ್ತ ಮಹಿಳೆ ಬಳಿಕ ಈ ವಿಷಯವನ್ನು ತನ್ನ ಗಂಡನ ಗಮನಕ್ಕೆ ತಂದಿದ್ದು, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಂಧ್ರಪ್ರದೇಶ ಮೂಲದ ಚೆನ್ನೂರು ಮಹೇಶ್ ಮತ್ತು ವನ್ನೂರು ಸ್ವಾಮಿ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ ಹಾಗೂ ₹25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಮೊಬೈಲ್ಗಳಲ್ಲಿ ಇನ್ನೂ ಹಲವಾರು ಮಹಿಳೆಯರು ಮತ್ತು ಯುವತಿಯರ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



