‘ಟಟೀರಿ’ ಹಾಡಿನ ಅಶ್ಲೀಲ ಸಾಹಿತ್ಯದಿಂದ ಎದ್ದ ವಿವಾದ ಇದೀಗ ಬಾದ್‌ಶಾ ಅವರಿಗೆ ದೊಡ್ಡ ಪಾಠವಾಗಿದ್ದು, ಅಂತಿಮವಾಗಿ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ತಲೆಬಾಗುವಂತಾಗಿದೆ.
ಹರಿಯಾಣ್ವಿ ಹಾಡಾದ ‘ಟಟೀರಿ’ ಮಹಿಳೆಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ವಿಷಯ ಗಂಭೀರವಾಗುತ್ತಿದ್ದಂತೆ NCW ಸ್ವಯಂ ಪ್ರಕರಣ ದಾಖಲಿಸಿಕೊಂಡು, ಬಾದ್‌ಶಾ ಸೇರಿದಂತೆ ನಿರ್ಮಾಪಕರಿಗೆ ನೋಟಿಸ್ ನೀಡಿತು.
ವಿಜಯಾ ರಾಹತ್ಕರ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಹಾಡಿನ ಅಶ್ಲೀಲತೆ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಯೋಗ ಸ್ಪಷ್ಟವಾಗಿ ತಿರಸ್ಕರಿಸಿತು. ಈ ಒತ್ತಡದ ನಡುವೆ ಬಾದ್‌ಶಾ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು.
ಆದರೆ ಇದು ಕೇವಲ ಕ್ಷಮೆಗೆ ಸೀಮಿತವಾಗಿಲ್ಲ. ತಮ್ಮ ಇಮೇಜ್ ಅನ್ನು ಮರುಸ್ಥಾಪಿಸಲು ಬಾದ್‌ಶಾ ಹಲವು ಘೋಷಣೆಗಳನ್ನು ಮಾಡಿದ್ದಾರೆ. 50 ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಅವರು, ಮಹಿಳಾ ಸಬಲೀಕರಣದ ಕುರಿತು ಸಕಾರಾತ್ಮಕ ಸಂದೇಶ ನೀಡುವ ಹೊಸ ಹಾಡನ್ನು 4 ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇದಲ್ಲದೆ, ವಿವಾದಿತ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ. ಮುಂದಿನ ದಿನಗಳಲ್ಲಿ ಕಲಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದಾಗಿ ಅವರು ಲಿಖಿತ ಭರವಸೆ ನೀಡಿದ್ದಾರೆ.



