ಮಾನವ ದೇಹದಲ್ಲಿ ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುವ ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷ ಪ್ಲೇಟ್‌ಲೆಟ್‌ಗಳು ಇರಬೇಕು. ಈ ಪ್ರಮಾಣ ಕಡಿಮೆಯಾದರೆ ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಪ್ಲೇಟ್‌ಲೆಟ್‌ಗಳ ಪ್ರಮಾಣ 1.5 ಲಕ್ಷಕ್ಕಿಂತ ಕಡಿಮೆಯಾದರೆ ಅಪಾಯದ ಸೂಚನೆಯಾಗಿದ್ದು, 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತದೆ, ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು.
ಪ್ಲೇಟ್‌ಲೆಟ್ ಕಡಿಮೆಯಾಗಲು ಕಾರಣಗಳು:
ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಮುಖ್ಯವಾಗಿ ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ, ಟೈಫಾಯ್ಡ್, ಲಿವರ್ ಸಮಸ್ಯೆಗಳು (ಸಿರೋಸಿಸ್), ಬೋನ್ ಮ್ಯಾರೋ ಸಮಸ್ಯೆಗಳು, ಕ್ಯಾನ್ಸರ್ ಹಾಗೂ ಕೀಮೋಥೆರಪಿ, ಆಟೋಇಮ್ಯೂನ್ ರೋಗಗಳು ಪ್ರಮುಖ ಕಾರಣಗಳಾಗಿವೆ.
ಲಕ್ಷಣಗಳು ಹೇಗಿರುತ್ತವೆ?:
ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ದೇಹದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ ಬೇಗ ನಿಲ್ಲದಿರುವುದು, ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಚುಕ್ಕೆಗಳು ಕಾಣಿಸಿಕೊಳ್ಳುವುದು, ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವವಾಗುವುದು ಪ್ರಮುಖ ಲಕ್ಷಣಗಳಾಗಿವೆ. ಮಹಿಳೆಯರಲ್ಲಿ ಪೀರಿಯಡ್ಸ್ ವೇಳೆ ಹೆಚ್ಚು ರಕ್ತಸ್ರಾವವಾಗುವುದು, ದಣಿವು, ದುರ್ಬಲತೆ ಮತ್ತು ತಲೆಸುತ್ತು ಕೂಡ ಕಾಣಿಸಬಹುದು.
ಮುನ್ನೆಚ್ಚರಿಕೆ ಕ್ರಮಗಳು:
ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗದಂತೆ ತಡೆಯಲು ಕೆಲ ಸರಳ ಕ್ರಮಗಳನ್ನು ಅನುಸರಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಸೊಳ್ಳೆಗಳಿಂದ ದೂರವಿರುವುದು,
ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಯಾವುದೇ ಜ್ವರ ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.



