ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ ಇಂದು ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶವ ಪತ್ತೆಯಾದುದು ದೃಢಪಟ್ಟಿದೆ.
ಏಪ್ರಿಲ್ 7ರಂದು ಕೇರಳದಿಂದ ಚಿಕ್ಕಮಗಳೂರಿಗೆ ಬಂದಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ ವೇಳೆ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದಳು. ಈ ಘಟನೆ ನಂತರ ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.
ಬಾಲಕಿಯ ಪತ್ತೆಗಾಗಿ ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶವಾಗಿರುವುದರಿಂದ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನೂ ಬಳಸಲಾಗಿತ್ತು.
ಮೂರು ದಿನಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಮಾಣಿಕ್ಯಧಾರಾದ ಆಳವಾದ ಪ್ರಪಾತದ ಕೆಳಭಾಗದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಈ ಘಟನೆ ಕುಟುಂಬಸ್ಥರಲ್ಲಿಯೂ ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖ ಮೂಡಿಸಿದ್ದು, ಕೇರಳದಿಂದ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



