ನವದೆಹಲಿ: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮೊನಾಲಿಸಾ ತನ್ನ ಪ್ರಿಯಕರ ಫರ್ಮಾನ್ ಖಾನ್ ರನ್ನು ವಿವಾಹವಾಗಿದ್ದಳು. ಆದರೆ ಮದುವೆಯ ಸಮಯದಲ್ಲಿ ಆಕೆ ಅಪ್ರಾಪ್ತೆಯಾಗಿದ್ದಳು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಮದುವೆ ಸಂದರ್ಭದಲ್ಲೇ ಅವರ ವಯಸ್ಸು ಮತ್ತು ‘ಲವ್ ಜಿಹಾದ್’ ಆರೋಪ ಸೇರಿದಂತೆ ಹಲವು ವಿವಾದಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್ಸಿಎಸ್ಟಿ) ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ತನಿಖೆ ಆರಂಭಿಸಿತ್ತು.
ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಮೊನಾಲಿಸಾ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದು, ಮದುವೆ ಸಮಯದಲ್ಲಿ 18 ವರ್ಷ ತುಂಬಿರಲಿಲ್ಲ ಎಂಬುದು ದೃಢಪಟ್ಟಿದೆ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆಕೆ 2009ರ ಡಿಸೆಂಬರ್ 30ರಂದು ಜನಿಸಿದ್ದು, 2026ರ ಮಾರ್ಚ್ 11ರಂದು ಮದುವೆಯಾಗಿದ್ದಾಳೆ. ಆ ವೇಳೆಗೆ ಆಕೆಗೆ ಕೇವಲ 16 ವರ್ಷ ವಯಸ್ಸು ಇತ್ತು.
ಮದುವೆ ವೇಳೆ ಆಕೆ 18 ವರ್ಷ ಪೂರೈಸಿದ್ದಾಳೆ ಎಂದು ತೋರಿಸಲು ನಕಲಿ ಜನನ ಪ್ರಮಾಣಪತ್ರ ಬಳಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದರ ಆಧಾರದ ಮೇಲೆ ಕೇರಳದ ದೇವಸ್ಥಾನದಲ್ಲಿ ಮದುವೆ ನಡೆಸಲಾಗಿದ್ದು, ನಂತರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮದುವೆ ನೋಂದಣಿಯೂ ಮಾಡಲಾಗಿದೆ.
ತನಿಖೆ ಬಳಿಕ ಫರ್ಮಾನ್ ಖಾನ್ ವಿರುದ್ಧ ಬಿಎನ್ಎಸ್, ಪೊಕ್ಸೋ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದೇ ವೇಳೆ, ಎನ್ಸಿಎಸ್ಟಿ ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 22ರಂದು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಗಮನಾರ್ಹವಾಗಿ, ಕಳೆದ ವರ್ಷ ಪ್ರಯಾಗರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಾಲಿಸಾ ತನ್ನ ವಿಶಿಷ್ಟ ಕಣ್ಣಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದಳು. ನಂತರ 2026ರ ಮಾರ್ಚ್ 11ರಂದು ಕೇರಳದ ಪೂವಾರಿನ ಅರುಮಾನೂರ್ ನೈನಾರ್ ದೇವಸ್ಥಾನದಲ್ಲಿ ಫರ್ಮಾನ್ ಖಾನ್ ರನ್ನು ವಿವಾಹವಾಗಿದ್ದಳು.



