ಚಿಕ್ಕಮಗಳೂರು: ಮನೆಯಲ್ಲೇ ಜೋಕಾಲಿ ಆಡುವಾಗ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಲೇಖನಾ (10) ಮೃತ ಬಾಲಕಿ ಎಂದು ತಿಳಿದುಬಂದಿದೆ. ಘಟನೆ ಸಂಭವಿಸಿದ ವೇಳೆ ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಜೋಕಾಲಿ ಹಾಕಿ ಆಟವಾಡುತ್ತಿದ್ದಾಗ ಸೀರೆ ಉರುಳಿ ಬಾಲಕಿಯ ಕೊರಳಿಗೆ ಸುತ್ತಿಕೊಂಡಿದ್ದು, ಉಸಿರುಗಟ್ಟಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.



