ಚಿತ್ರದುರ್ಗ: ಇಲ್ಲಿನ ಕಲ್ಕುಂಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಲಾರಿಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಜರುಗಿದೆ.
ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಸಾಗುತ್ತಿದ್ದ ಲಾರಿ ಹಾಗೂ ದಾವಣಗೆರೆಯಿಂದ ಚಿತ್ರದುರ್ಗ ಕಡೆ ಬರುತ್ತಿದ್ದ ಮತ್ತೊಂದು ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಒಂದು ಲಾರಿ ಡಿವೈಡರ್ ದಾಟಿ ಎದುರು ಬದಿಗೆ ಹೋಗಿ ಇನ್ನೊಂದು ಲಾರಿಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮೊದಲಿಗೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಬಳಿಕ ಮೃತಪಟ್ಟಿದ್ದಾರೆ. ಈವರೆಗೆ ಮೃತರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.



