ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.
ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದು, ನ್ಯಾಯಾಧೀಶರು ಅವರ ಹಾಜರಿಯನ್ನು ದಾಖಲಿಸಿ ತೀರ್ಪನ್ನು ಮುಂದೂಡಿದರು. ಮಧ್ಯಾಹ್ನ ಬಳಿಕ, ವಿಶೇಷವಾಗಿ 3 ಗಂಟೆ ಸುಮಾರಿಗೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ ಎಂಬ ಸುಳಿವು ನೀಡಲಾಗಿದೆ.
ಸುಮಾರು 10 ವರ್ಷಗಳ ವಿಚಾರಣೆ ಬಳಿಕ ಈ ಕೊಲೆ ಪ್ರಕರಣದ ತೀರ್ಪು ಇಂದು ಹೊರಬೀಳಲಿದ್ದು, ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆಯೋ ಅಥವಾ ಖುಲಾಸೆಯೋ ಎಂಬ ಕುತೂಹಲ ಹಾಗೂ ಆತಂಕ ಹೆಚ್ಚಾಗಿದೆ.
2016ರ ಜೂನ್‌ನಲ್ಲಿ ಧಾರವಾಡದಲ್ಲಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಸಂಚು ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಆರು ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದರು.
ಯೋಗೇಶ್ ಗೌಡ ಕುಟುಂಬದ ಮನವಿಯ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಬಳಿಕ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು.
ಪ್ರಸ್ತುತ ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಇಬ್ಬರು ಪೊಲೀಸರು ಸೇರಿ ಒಟ್ಟು 21 ಮಂದಿ ಆರೋಪಿಗಳಿದ್ದಾರೆ. ಆರೋಪಿಗಳ ಹಾಗೂ ಸರ್ಕಾರಿ ವಕೀಲರು ಸಲ್ಲಿಸಿದ ದಾಖಲೆಗಳ ಪರಿಶೀಲನೆ ಹಿನ್ನೆಲೆಯಲ್ಲಿ, ನ್ಯಾಯಾಲಯ ಏಪ್ರಿಲ್ 9ರಂದು ತೀರ್ಪನ್ನು ಇಂದು (ಏಪ್ರಿಲ್ 15)ಕ್ಕೆ ಮುಂದೂಡಿತ್ತು.



