ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಬೆಟಗೇರಿ ನಗರಸಭೆ ಚುನಾವಣೆ ಆರಂಭಗೊಂಡಿದೆ. ಅಭ್ಯರ್ಥಿಗಳು ಮತಗಟ್ಟೆಗೆ ಭರ್ಜರಿ ಪೂಜೆ ಸಲ್ಲಿಸಿ ಮತದಾನ ಮಾಡಿದರು. ಇನ್ನು ಹಲವೆಡೆ ಕದನ ಕಲಿಗಳು ಮತಗಟ್ಟೆ ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೆಲುವಿಗಾಗಿ ಪ್ರಾರ್ಥಿಸಿದರು.

ಅವಳಿ ನಗರದ 19ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ನೆಲವಡಿ ಕುಟುಂಬಸ್ಥರು
ಮತಗಟ್ಟೆ ಬಾಗಿಲಿಗೆ ತೆಂಗಿನಕಾಯಿ ಒಡೆದು, ಹೂ, ಅಡಿಕೆ, ವಿಳ್ಯದೆಲೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಪೂಜೆ ಸಲ್ಲಿಸಿದ ಮಹಿಳೆಗೆ ಮತಗಟ್ಟೆ ಅಂಗಳದಲ್ಲೇ ಹಣ ನೀಡಿದರು. ಇನ್ನು ಅಭ್ಯರ್ಥಿ ಕುಟುಂಬಸ್ಥರು ಪೂಜೆ ಮಾಡುವುದನ್ನು ತಡೆಯದ ಚುನಾವಣಾಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕೈಕಟ್ಟಿ ಅಸಹಾಯಕರಂತೆ ನಿಂತಿದ್ದರು.

ಇನ್ನು ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಮತಯಂತ್ರ ಕೈಕೊಟ್ಟಿದ್ದರಿಂದ 15ನೇ ವಾರ್ಡಿನಲ್ಲಿ
ಸುಮಾರು 45 ನಿಮಿಷ ತಡವಾಗಿ ಆರಂಭವಾಯಿತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.6 ರಲ್ಲಿನ ಮತಗಟ್ಟೆ ನಂ.62 ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಕಾಯುತ್ತಾ ನಿಂತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು
ವಿವಿ ಪ್ಯಾಟ್ ಬದಲಾಯಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.